Period Holiday : ರಾಜ್ಯ ಸರ್ಕಾರವು ಇತ್ತೀಚಿಗೆ ಮಹಿಳಾ ನೌಕರರಿಗೆ ಮುಟ್ಟಿನ ರಜೆಯನ್ನು ಘೋಷಣೆ ಮಾಡಿ ಆದೇಶವನ್ನು ಹೊರಡಿಸಿತ್ತು. ಮುಟ್ಟಿನ ರಜೆಯನ್ನು ನಿರಾಕರಿಸುವವರಿಗೆ 5000 ದಂಡ ವಿಧಿಸುವ ಮಸೂದೆಯನ್ನು ಕೂಡ ಜಾರಿಗೆ ತರಲು ಮುಂದಾಗಿದೆ. ಇದರ ಬೆನ್ನಲ್ಲೇ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೂ ಕೂಡ ಮುಟ್ಟಿನ ರಜೆಯನ್ನು ವಿಸ್ತರಿಸಿ ಸರ್ಕಾರ ಆದೇಶವನ್ನು ಹೊರಡಿಸಲು ಮುಂದಾಗಿದೆ.
ಹೌದು, ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದರಂತೆ ವರ್ಷಕ್ಕೆ 12 ವೇತನ ಸಹಿತ ಋುತುಚಕ್ರ ರಜೆ ನೀಡಲು ಅನುವಾಗುವಂತೆ ಕರ್ನಾಟಕ ಮಹಿಳಾ ಯೋಗಕ್ಷೇಮ ಕಾಯ್ದೆ-2025 ಜಾರಿಗೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ.
ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಋತುಚಕ್ರ ರಜೆ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಒಂದು ದಿನ ರಜೆ ನೀಡಲಾಗುವುದು. ಇದರಿಂದ ಶೈಕ್ಷಣಿಕ ಹಾಜರಾತಿಗೆ ಸಮಸ್ಯೆಯಾಗದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ ಎರಡರಷ್ಟು ಹಾಜರಾತಿ ವಿನಾಯಿತಿ ನೀಡಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ರಾಜ್ಯದಲ್ಲಿ ಋತುಚಕ್ರ ರಜೆ ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಕಾರ್ಖಾ ನೆಗಳು ಹಾಗೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ ರಜೆ ಅನ್ವಯವಾಗಲಿದೆ. ಲಿಂಗತ್ವಅಲ್ಪಸಂಖ್ಯಾತ ವ್ಯಕ್ತಿಗಳಲ್ಲಿ ಟ್ರಾನ್ಸ್ ಮೆನ್ ಹಾಗೂ ಟ್ರಾನ್ಸ್ ವುಮೆನ್ ಇಬ್ಬರಿಗೂ ಈ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇನ್ನು ಮುಟ್ಟು ಅವಧಿ ಮುಗಿದ ಅಥವಾ 52 ವರ್ಷ ದಾಟಿದ ಮಹಿಳಾ ಉದ್ಯೋಗಿಗೆ ಮುಟ್ಟಿನ ರಜೆ ಅನ್ವಯವಾಗುವುದಿಲ್ಲ.
