Central government: ರಾಜ್ಯದ ತೊಗರಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ಕೃಷಿ ಸಚಿವಾಲಯವು, ರಾಜ್ಯದಲ್ಲಿ ಬೆಂಬಲ ಬೆಲೆ ಯೋಜನೆಯಡಿ (MSP) ಬರೋಬ್ಬರಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ.
ಈ ನಿರ್ಧಾರದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕರ್ನಾಟಕದ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ಸಿಗಲಿದ್ದು, ಕೇಂದ್ರದ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ಪ್ರಸಕ್ತ ಸಾಲಿನಲ್ಲಿ (2025-26) ಉತ್ತಮ ಮಳೆಯಾಗಿದ್ದು, ಅಂದಾಜು 12.60 ಲಕ್ಷ ಮೆಟ್ರಿಕ್ ಟನ್ ತೊಗರಿ ಉತ್ಪಾದನೆಯ ನಿರೀಕ್ಷೆಯಿದೆ. ಆದರೆ, ಮಾರುಕಟ್ಟೆಯಲ್ಲಿ ತೊಗರಿ ಧಾರಣೆ ಕ್ವಿಂಟಾಲ್‌ಗೆ ₹5,830 ರಿಂದ ₹6,700 ರಷ್ಟಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ (MSP) ₹8,000 ಇದೆ. ಮಾರುಕಟ್ಟೆ ದರವು ಎಂಎಸ್‌ಪಿಗಿಂತ ತೀರಾ ಕಡಿಮೆಯಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿತ್ತು.ಈ ಹಿನ್ನೆಲೆಯಲ್ಲಿ ಡಿಸೆಂಬರ್ 4 ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದ ಸಚಿವ ಪ್ರಲ್ಹಾದ ಜೋಶಿ, ಕೂಡಲೇ ಮಾರುಕಟ್ಟೆ ಪ್ರವೇಶಿಸಿ ತೊಗರಿ ಖರೀದಿಸಲು ಕೋರಿದ್ದರು.
ಜೋಶಿಯವರ ಮನವಿಗೆ ಕೇವಲ ಐದಾರು ದಿನಗಳಲ್ಲಿ ಸ್ಪಂದಿಸಿರುವ ಕೃಷಿ ಸಚಿವರು, ಡಿಸೆಂಬರ್ 10 ರಂದು ಖರೀದಿ ಆದೇಶ ಹೊರಡಿಸಿದ್ದಾರೆ.
ಖರೀದಿ ಪ್ರಕ್ರಿಯೆ ಹೇಗೆ?:
* ಪ್ರಮಾಣ: ಒಟ್ಟು 9,67,000 ಮೆಟ್ರಿಕ್ ಟನ್ ತೊಗರಿ.
* ಏಜೆನ್ಸಿಗಳು: ನಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ಸಂಸ್ಥೆಗಳ ಮೂಲಕ ಖರೀದಿ.
* ಅವಧಿ: ಖರೀದಿ ಪ್ರಾರಂಭವಾದ ದಿನಾಂಕದಿಂದ 90 ದಿನಗಳವರೆಗೆ ಈ ಪ್ರಕ್ರಿಯೆ ನಡೆಯಲಿದೆ.
