ಮೆಕ್ಸಿಕೋ ಸಿಟಿ: ಭಾರತ ಸೇರಿ ಇತರ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ಹೇರಿದ ರೀತಿಯಲ್ಲೇ ಇದೀಗ ಮೆಕ್ಸಿಕೋ ಸಹ ಶೇ.50ರಷ್ಟು ಹೆಚ್ಚುವರಿ ಸುಂಕ ಹೇರಲು ಸಜ್ಜಾಗಿದೆ. ಮೆಕ್ಸಿಕೋ ದೇಶೀಯ ಉದ್ಯಮ ಮತ್ತು ಉತ್ಪಾದಕರನ್ನು ರಕ್ಷಿಸುವ ಸಲುವಾಗಿ ಭಾರತ, ಚೀನ ಸೇರಿ ಏಷ್ಯಾದ ದೇಶ ಗಳಿಂದ ಆಯ್ದ ಆಮದು ಉತ್ಪನ್ನಗಳ ಮೇಲೆ 2026ರಿಂದ ಶೇ. 50 ರಷ್ಟು ಹೆಚ್ಚುವರಿ ಸುಂಕ ವಿಧಿಸಲು ಮೆಕ್ಸಿಕೋ ಸಂಸತ್ತಿನಲ್ಲಿ ತೀರ್ಮಾನಿಸಿದೆ.
ಅದರಂತೆ ವಾಹನಗಳ ಬಿಡಿ ಭಾಗ, ಬಟ್ಟೆಗಳು, ಪ್ಲಾಸ್ಟಿಕ್ಗಳು, ಉಕ್ಕು ಗೃಹೋಪಯೋಗಿ ವಸ್ತುಗಳು, ಆಟಿಕೆ ಗಳು, ಜವುಳಿ, ಪೀಠೋಪಕರಣಗಳು, ಪಾದರಕ್ಷೆಗಳು ಸೇರಿ ಹಲವು ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗುತ್ತಿದ್ದು ಇದು 2026 ರ ಜ.1ರಿಂದಲೇ ಅನ್ವಯಿಸಲಿದೆ ಎನ್ನಲಾಗಿದೆ.
ಮೆಕ್ಸಿಕೋ ಜತೆ ವ್ಯಾಪಾರ ಒಪ್ಪಂದ ಮಾಡಿ ಕೊಳ್ಳದ ದೇಶಗಳಾದ ಭಾರತ, ಚೀನ, ಥಾಯ್ಲೆಂಡ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾದಂತೆ ದೇಶಗಳ ಮೇಲೆ ಇದು ಪರಿಣಾಮ ಬೀರಲಿದೆ. ವರದಿಯ ಪ್ರಕಾರ ಭಾರತಕ್ಕೆ ಸುಮಾರು 9,000 ಕೋಟಿ ರೂ. ಮೌಲ್ಯದ ಕಾರು ರಫ್ತು ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
