8
ಸುಳ್ಯ, ಬೆಳ್ತಂಗಡಿ: ಶಾಲಾ ಪ್ರವಾಸದ ಖುಷಿಯ ಸಂದರ್ಭ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮರೆತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದು ಹೋದ ಇಂಥಹಾ ಶಾಲೆಯವರಿಂದ 5,000 ರೂ. ದಂಡ ವಸೂಲಿ ಮಾಡುವ ಮೂಲಕ ಸಂಪಾಜೆ ಗ್ರಾಮ ಪಂಚಾಯತ್ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಪರಿಸರ ಜಾಗೃತಿಯ ಪಾಠವನ್ನು ಮಾಡಿದೆ.
ಬೆಳ್ತಂಗಡಿ ತಾಲೂಕಿನ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು ಶನಿವಾರ ಸಂಪಾಜೆಯ ಹೆದ್ದಾರಿ ಬದಿ ಉಪಾಹಾರ ಸೇವಿಸಿ ತ್ಯಾಜ್ಯವನ್ನು ಎಸೆದಿದ್ದರು. ಸ್ಥಳೀಯರೊಬ್ಬರ ವಿರೋಧದ ನಡುವೆಯೂ ಶಿಕ್ಷಕರು ಕಸವನ್ನು ತೊರೆದು ಹೋಗಿದ್ದರು. ಘಟನೆಯ ವೀಡಿಯೋ ಪಸರಿಸುತ್ತಿದ್ದಂತೆ ಎಚ್ಚೆತ್ತ ಶಾಲೆಯವರೇ ಪಂಚಾಯತ್‌ಗೆ ಕರೆ ಮಾಡಿ ನಾವೇ ಬಂದು ಕಸ ತೆರವು ಮಾಡುವುದಲ್ಲದೆ ಸೂಕ್ತ ದಂಡ ಪಾವತಿಸುವುದಾಗಿಯೂ ಹೇಳಿದ್ದರು. ಅದರಂತೆ ಸೋಮವಾರ ಸಂಸ್ಥೆ ಯವರು ಆನ್‌ಲೈನ್ ಮೂಲಕ ದಂಡ ಪಾವತಿಸಿ ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆ ಯಲ್ಲಿ ಪಂಚಾಯತ್ ವತಿಯಿಂದಲೇ ತ್ಯಾಜ್ಯವನ್ನು ತೆರವು ಮಾಡಲಾಯಿತು.
