ಹೊಸದಿಲ್ಲಿ: ಭಾರತೀಯ ರೈಲ್ವೇಯು ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ಮೊದಲ ರಿಸರ್ವೇಶನ್ ಚಾರ್ಟ್ (ಮುಂಗಡ ಕಾಯ್ದಿರಿಸುವಿಕೆಯ ಪಟ್ಟಿ) ಸಿದ್ದಪಡಿಸುವ ಸಮಯದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. 10 ಗಂಟೆಗಳ ಮುಂಚೆಯೇ ಮೊದಲ ರಿಸರ್ವೇಶನ್ ಚಾರ್ಟ್ ಅನ್ನು ಪ್ರಕಟಿಸಲಿದ್ದು, ಈ ಹಿಂದಿನ 4 ಗಂಟೆ ಮುಂಚೆ ಪ್ರಕಟಿಸುವ ನೀತಿ ಬದಲಾಗಿದೆ. 10 ಗಂಟೆ ಮುಂಚಿತ ಪ್ರಯಾಣಿಕರು ತಮ್ಮ ಟಿಕೆಟ್ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು.
ಯಾವಾಗ ಚಾರ್ಟ್ ಸಿದ್ಧ?
ಈ ಹೊಸ ನಿಯಮದ ಪ್ರಕಾರ, ಮುಂಜಾನೆ 5ರಿಂದ ಮಧ್ಯಾಹ್ನ 2 ಗಂಟೆ ಒಳಗೆ ಹೊರಡುವ ರೈಲುಗಳಿಗೆ ಹಿಂದಿನ ರಾತ್ರಿ 8 ಗಂಟೆಗೆ ಚಾರ್ಟ್ ಸಿದ್ದವಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ಮೇಲೆ ಹೊರಡುವ ರೈಲುಗಳ ಮೊದಲ ಮುಂಗಡ ಬುಕ್ಕಿಂಗ್ ಚಾರ್ಟ್ ರೈಲುಗಳು ಹೊರಡುವ 10 ಗಂಟೆಗೂ ಮೊದಲು ಸಿದ್ದವಾಗುತ್ತದೆ.
ರೈಲು ಪ್ರಯಾಣಿಕರಿಗೆ ಕೊನೆಯ ಕ್ಷಣದಲ್ಲಿ ಮಾನಸಿಕ ಒತ್ತಡ, ಟಿಕೆಟ್ ಸಿಗುತ್ತಾ ಇಲ್ಲವೇ.ಎಂಬ ಅಸ್ತಿರತೆ ಕಡಿಮೆ ಮಾಡಲು, ಅದರಲ್ಲೂ ವಿಶೇಷವಾಗಿ ದೂರದ ಪ್ರಯಾಣ ಬಯಸುವವರಿಗೆ ಈ ಪರಿಷ್ಕರಣೆಯಿಂದ ಅನುಕೂಲವಾಗಲಿದೆ. ಇದನ್ನು ಎಲ್ಲ ವಲಯಗಳಲ್ಲೂ ಅನುಷ್ಠಾನಗೊಳಿಸಲು ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ. ಈ ನೀತಿಗಿಂತ ಮೊದಲು, ರೈಲು ಹೊರಡಲು 4 ಗಂಟೆಗಳ ಮುಂಚೆ ಮೊದಲು ಚಾರ್ಟ್ ಸಿದ್ಧವಾಗುತ್ತಿತ್ತು. ಇದರಿಂದ ಪ್ರಯಾಣಿಕರು ಒತ್ತಡಕ್ಕೆ ಬೀಳುತ್ತಿದ್ದರು.
