Government Employees : ಕಳೆದ ಸಮಯದಲ್ಲಿ ಕೆಲ ನೌಕರರು ಅಸಭ್ಯ ಉಡುಗೆ ಧರಿಸಿ ಕಚೇರಿಗೆ ಬರುವ ಪ್ರಕರಣಗಳು ಬಹಳಷ್ಟು ವರದಿಯಾಗಿದ್ದು, ಸಾರ್ವಜನಿಕ ಮತ್ತು ಕೆಲವು ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕಚೇರಿಗೆ ಬರುವಾಗ ಸರಿಯಾದ, ಸಭ್ಯ ಉಡುಗೆ ತೊಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೌದು, ರಾಜ್ಯ ಸರ್ಕಾರಿ ನೌಕರರು ಸಭ್ಯ ಬಟ್ಟೆಗಳನ್ನು (Decent Clothes) ಧರಿಸಿಕೊಂಡು ಕಚೇರಿಗೆ ಬರಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕಟ್ಟುನಿಟ್ಟಿನ ಸೂತ್ತೋಲೆ ಹೊರಡಿಸಿದೆ.
ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸರ್ಕಾರಿ ನೌಕರರ ವರ್ತನೆ, ವಸ್ತ್ರಸಂಹಿತೆ ಪಾಲನೆ ಮತ್ತು ರಿಜಿಸ್ಟರ್ ನಿರ್ವಹಣೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಹಲವು ಬಾರಿ ಸೂಚನೆ ನೀಡಿದ್ದರೂ ಪಾಲನೆಯಾಗದ ಕಾರಣ, ಈ ಬಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ.
ಇದೀಗ ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾ ಅಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿಗಳಿಗೆ ಈ ಸೂಚನೆ ಕಳುಹಿಸಲಾಗಿದೆ. ಹರಿದ ಜೀನ್ಸ್, ಸ್ಲೀವ್‌ಲೆಸ್ ಉಡುಗೆ, ತುಂಬಾ ಬಿಗಿಯಾದ ಬಟ್ಟೆ ಇತ್ಯಾದಿ ಧರಿಸುವುದು ಅನ್ಯರಿಗೆ ಅಸಮಾಧಾನ ಉಂಟುಮಾಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ನೌಕರರು ತಮ್ಮ ಉಡುಗೆಯನ್ನು ಸಭ್ಯವಾಗಿ ಇಟ್ಟುಕೊಂಡು, ಕಚೇರಿ ಪರಿಸರಕ್ಕೆ ಅನುಗುಣವಾಗಿ ಇರಬೇಕು ಎಂದು ಇಲಾಖೆ ಹೇಳಿದೆ.
