ಮಂಗಳೂರು: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನೆಲೆ ಕೋಳಿ ಅಂಕ ನಡೆಯುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು, ಪುತ್ತೂರು ಶಾಸಕ ಅಶೋಕ್ ರೈ ಮತ್ತು ಇತರ 16 ಜನರ ವಿರುದ್ಧ ಶನಿವಾರ ಎಫ್ಐಆರ್ ದಾಖಲು ಮಾಡಲಾಗಿತ್ತು. ಇದೀಗ ಪುತ್ತೂರಿನ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ 27 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ದಾಳಿಯ ವೇಳೆ ಸುಮಾರು 20 ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಕೋಳಿ ಅಂಕ ನಿಷೇಧದ ಬಗ್ಗೆ ಅಲ್ಲಿದ್ದವರಿಗೆ ಮಾಹಿತಿ ನೀಡಿದ್ದರೂ, ಸ್ಥಳದಲ್ಲಿದ್ದವರು ಅಲ್ಲಿಂದ ತೆರಳಲು ಹಿಂದೇಟು ಹಾಕಿದ್ದಾರೆ.
ಸ್ಥಳದಲ್ಲಿದ್ದ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುರಳೀಧರ ಪೈ, ದಯಾನಂದ ಉಜಿರೆಮಾರು, ಹರಿಪ್ರಸಾದ್ ಯಾದವ್, ವಿಟ್ಲದ ಅಶೋಕ್ ಶೆಟ್ಟಿ, ರಾಜೇಶ್ ಬಾಳೆಕಲ್ಲು ಹುಂಜ ಕಾದಾಟ ಮುಂದುವರಿಸುವಂತೆ ಜನರನ್ನು ಪ್ರಚೋದಿಸಿದ್ದಾರೆ ಎಂಬ ಆರೋಪವಿದೆ. ಇದರಂತೆ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ರ ಸೆಕ್ಷನ್ 189(2), 49, 221, 223, ಮತ್ತು 190 ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 11 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೇಪು ಉಳ್ಳಾಪ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ವರ್ಷಕ್ಕೊಮ್ಮೆ ಕೋಳಿ ಅಂಕ ನಡೆಯುತ್ತಿದ್ದು, ಕೇವಲ ಜಾತ್ರೆ ಸಂದರ್ಭದಲ್ಲಿ ಸಂಪ್ರದಾಯ ಪ್ರಕಾರ ಜೂಜು ಕಟ್ಟದೆ ಕೋಳಿ ಅಂಕ ಮಾಡಲಾಗುತ್ತದೆ. ಕಾಂಗ್ರೆಸ್ ಶಾಸಕ ಈ ಕುರಿತು ಪೊಲೀಸರಿಗೆ ಮನವರಿಗೆ ಮಾಡಿಕೊಟ್ಟಿದ್ದರು.
