ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಹೆಸರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆದಿದ್ದು, ಕೊನೆಗೆ ಸ್ಪೀಕರ್ ಯು ಟಿ ಖಾದರ್ ಅವರು ಸದನದಲ್ಲಿ ಯಾರಾದರೂ ಇನ್ನೊಬ್ಬರ ಹೆಸರನ್ನು ಸರಿಯಾಗಿ ಸಂಬೋಧನೆ ಮಾಡದಿದ್ದರೆ ದಂಡ ಹಾಕುವ ಎಚ್ಚರಿಕೆಯನ್ನು ಕೊಟ್ಟರು.
ನಡೆದಿರುವುದೇನೆಂದರೆ, ಪ್ರಶ್ನೋತ್ತರ ಕಲಾಪ ವೇಳೆ ಚಿಕ್ಕಮಗಳೂರು ಶಾಸಕ ಎಚ್ ಡಿ ತಮ್ಮಯ್ಯ ತಮ್ಮ ಕ್ಷೇತ್ರದ ಕುರಿತು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಲು ಬಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮಯ್ಯ ಅವರನ್ನು ತಿಮ್ಮಯ್ಯ ಎಂದು ಕರೆದರು. ಆಗ ನಗುತ್ತಲೇ ಆಕ್ಷೇಪ ವ್ಯಕ್ತಪಡಿಸಿದ ತಮ್ಮಯ್ಯ ಅವರು, ಸಭಾಧ್ಯಕ್ಷರೇ ನೀವು ತಿಮ್ಮಯ್ಯ ತಿಮ್ಮಯ್ಯ ಎಂದು ಹೇಳಿ ಹೇಳಿ ಎಲ್ಲರೂ ಹಾಗೇ ಕರೀತಿದ್ದಾರೆ ಎಂದು ಹೇಳಿದರು.
ಆಗ ಪ್ರಿಯಾಂಕ್ ಖರ್ಗೆ ಅವರು, ಅವರದ್ದು ಬಿಡಿ ಸಭಾಧ್ಯಕ್ಷರೇ, ನನ್ನ ಹೆಸರನ್ನೂ ನೀವು ಪ್ರಿಯಾಂಕಾ ಬದಲು ಪ್ರಿಯಾಂಕ್ ಅಂತನೇ ಕರೀರಿ. ಇಲ್ಲದಿದ್ದರೆ ಎಲ್ಲ ನನ್ನ Gender ಚೇಂಜ್ ಮಾಡ್ತಾರೆ ಅಂದ್ರು… ಆಗ ಇಡೀ ಸದನ ಕೆಲ ಹೊತ್ತು ನಗೆಗಡಲಲ್ಲಿ ತೇಲಿತು.
ಕೊನೆಗೆ ಸ್ಪೀಕರ್ ಯು.ಟಿ. ಖಾದರ್, ಇನ್ನು ಮುಂದೆ ತಿಮ್ಮಯ್ಯ ಅಂತ ಯಾರಾದರೂ ಕರೆದರೆ ಅವರಿಗೆ ದಂಡ ಹಾಕ್ತೀವಿ ಎಂದು ಎಚ್ಚರಿಕೆ ಕೊಟ್ಟರು.
