Bigg Boss-12 : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಚಿತ್ರ ಕಳೆದ ವಾರ ಭರ್ಜರಿಯಾಗಿ ತೆರೆಕಂಡಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ ಗಿಲ್ಲಿ ನಟ ಕೂಡ ಸೈಡ್ ಆಕ್ಟರ್ ಆಗಿ ಅಭಿನಯಿಸಿದ್ದು, ಅಭಿಮಾನಿಗಳನ್ನು ಇನ್ನು ಸಂತೋಷಪಡಿಸಿದೆ. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಡೆವಿಲ್ ಟ್ರೈಲರ್ ಅನ್ನು ತೋರಿಸಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಇದು ಆಗಲಿಲ್ಲ. ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದವು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ರಜತ್ ಅವರು ಡೆವಿಲ್ ಟ್ರೈಲರ್ ಅನ್ನು ಯಾಕೆ ಬಿಗ್ ಬಾಸ್ ಮನೆಯಲ್ಲಿ ಪ್ರದರ್ಶಿಸಲಿಲ್ಲ ಎಂಬುದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಯಸ್, ಬಿಗ್ ಬಾಸ್ ಶೋ ನಡೆಯುತ್ತಿರುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಾವುದಾದರೂ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದ್ದರೆ ಸಿನಿಮಾ ನಟ ನಟಿಯರು ಬಿಗ್ ಬಾಸ್ ಮನೆ ಒಳಗೆ ಬಂದು ಅದನ್ನು ಪ್ರಚಾರ ಮಾಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ಅಥವಾ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗಿದ್ದು ಅವರು ಚಿತ್ರದಲ್ಲಿ ನಟಿಸಿದ್ದಾರೆ ಅಂತಹ ಚಿತ್ರಗಳ ಟ್ರೈಲರ್ ಅನ್ನು ಪ್ರದರ್ಶನ ಮಾಡುವುದು ಉಂಟು. ಕಳೆದ ಸಲ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಉಗ್ರಂ ಮಂಜು ಅವರು ನಟಿಸಿದ್ದ ಮ್ಯಾಕ್ಸ್ ಚಿತ್ರದ ಟ್ರೈಲರ್ ಪ್ರದರ್ಶಿಸಿದ್ದನ್ನು ಇಡೀ ಕನ್ನಡ ನಾಡಿನ ಜನತೆ ನೋಡಿದೆ. ಅಂತೆಯೇ ಈ ಬಾರಿ ಗಿಲ್ಲಿ ನಟಿಸಿರುವ ಡೆವಿಲ್ ಚಿತ್ರದ ಟ್ರೈಲರ್ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರದರ್ಶನವಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದು ಆಗಲಿಲ್ಲ. ಹೀಗಾಗಿ ಗಿಲ್ಲಿ ನಟನಿಗೆ ಅನ್ಯಾಯವಾಗಿದೆ ಎಂಬ ಕೂಗು ಕೂಡ ಕೇಳಿ ಬಂದಿತ್ತು. ಈ ವಿಚಾರವಾಗಿ ಇದೀಗ ರಜತ್ ಅವರು ಮಾತನಾಡಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಿಂದ ಹೊರಬಂದ ರಜತ್ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ರಜತ್ ಕಳೆದ ಸೀಸನ್‌ನಲ್ಲಿ ಮಿಂಚಿದ್ದರು ಮತ್ತು ಈ ಬಾರಿ ಅತಿಥಿಯಾಗಿ ಮನೆಗೆ ಬಂದಿದ್ದರು. ಒಂದು ತಿಂಗಳ ಕಾಲ ಮನೆಯಲ್ಲಿ ಇದ್ದ ಅವರು, ಸ್ಪರ್ಧಿಗಳ ಜೊತೆಗೆ ಚೆನ್ನಾಗಿ ಬೆರೆತಿದ್ದರು. ಗಿಲ್ಲಿಯೊಂದಿಗೆ ಕೂಡ ಉತ್ತಮ ಸ್ನೇಹವಿತ್ತು. ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ರಜತ್ ‘ಡೆವಿಲ್’ ಟ್ರೇಲರ್ ಬಗ್ಗೆ ಹೇಳಿದ್ದಾರೆ. ‘ಸಿನಿಮಾ ತಂಡದವರು ಬಿಗ್ ಬಾಸ್ ವಾಹಿನಿಯನ್ನು ಸಂಪರ್ಕಿಸಿಲ್ಲ. ಅವರು ಅಪ್ರೋಚ್ ಮಾಡದ ಕಾರಣ ಟ್ರೇಲರ್ ಪ್ರಸಾರವಾಗಲಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಪ್ರಚಾರಗಳು ಹೇಗೆ ನಡೆಯುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಹಾಡುಗಳನ್ನು ಪ್ರಸಾರ ಮಾಡಲು ವಾಹಿನಿ ಹಕ್ಕುಗಳನ್ನು ಪಡೆಯುತ್ತದೆ. ಅದೇ ರೀತಿ, ಸಿನಿಮಾ ಟ್ರೇಲರ್‌ಗಳಿಗೆ ಕೂಡ ಒಪ್ಪಂದಗಳು ಬೇಕು. ಚಿತ್ರತಂಡಗಳು ವಾಹಿನಿಯನ್ನು ಸಂಪರ್ಕಿಸಿ, ಪ್ರಚಾರಕ್ಕೆ ಅನುಮತಿ ಪಡೆಯಬೇಕು. ‘ಪ್ಯಾರ್’ ಚಿತ್ರ ಇದನ್ನು ಮಾಡಿದ್ದರಿಂದ ಪ್ರಸಾರವಾಯಿತು ಎಂದು ಅವರು ಹೇಳಿದ್ದಾರೆ.
