Mangaluru : ಹೆಂಡತಿ ಒಬ್ಬಳು ತನ್ನ ಗಂಡನನ್ನು ಕೊಂದಿರುವುದು ಕೋರ್ಟ್ ಒಳಗೆ ಸಾಬೀದಾದರೂ ಕೂಡ ಆಕೆಯನ್ನು ಆರೋಪ ಮುಕ್ತವನ್ನಾಗಿಸಿರುವ ಅಚ್ಚರಿಯ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹೌದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಿತ್ರ ಪ್ರಕರಣ ಒಂದು ನಡೆದಿದೆ. ಇದು ಎಲ್ಲರಿಗೂ ಕೂಡ ಅತೀವ ಆಶ್ಚರ್ಯವನ್ನು ಉಂಟು ಮಾಡಿದೆ. ಹಾಗಿದ್ದರೆ ಕೋರ್ಟ್ ಯಾಕೆ ಹೀಗೆ ಮಾಡಿತು? ಈ ಪ್ರಕರಣದ ಹಿನ್ನೆಲೆ ಏನು?
ಏನಿದು ಪ್ರಕರಣ?
2022ರ ಜುಲೈ 5 ರಂದು ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ಯೋಹಾನನ್ ಎಂಬುವವರನ್ನು ಅವರ ಪತ್ನಿ ಎಲಿಯಮ್ಮ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಪ್ರಕರಣದ ವಿಚಾರಣೆ ವೇಳೆ ಬೆಳ್ತಂಗಡಿ ಪೊಲೀಸರು ಆರೋಪಿ ಎಲಿಯಮ್ಮ ಬಂಧಿಸಿದ್ದರು. ಬಳಿಕ ವಿಚಾರಣೆ ವೇಳೆ ಎಲಿಯಮ್ಮ ‘ಪರಿಯನ್ನು ಕೊಲೆ ಮಾಡಿರುವುದು ಹೌದು’ ಎಂದು ಒಪ್ಪಿಕೊಂಡಿದ್ದರು. ಹೀಗಾಗಿ ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಸಾಕ್ಷಿ ವಿಚಾರಣೆಯನ್ನು ಮುಂದುವರೆಸಿತ್ತು. ಸಾಕ್ಷಿದಾರರು ಕೂಡ ಆಕೆಯ ವಿರುದ್ಧ ಸಾಕ್ಷಿ ನುಡಿದಿದ್ದರು.
ಇದೀಗ ಕೋರ್ಟ್ ನಲ್ಲಿ ಆರೋಪಿ ಪರ ವಕೀಲ ವಿಕ್ರಮ್ ರಾಜ್ ಎ. ವಾದ ಮಂಡಿಸಿದ್ದರು. ಎಲಿಯಮ್ಮ ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥತೆ ಮತ್ತು ಭ್ರಮೆಗಳಿಂದ (Delusional Disorder) ಬಳಲುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ ಕೃತ್ಯವು ತಪ್ಪು ಅಥವಾ ಕಾನೂನು ಬಾಹಿರ ಎಂದು ತಿಳಿಯುವ ಸ್ಥಿತಿಯಲ್ಲಿ ಆರೋಪಿ ಇರಲಿಲ್ಲ. ಆದ್ದರಿಂದ ಆಕೆ ಅಪರಾಧ ಎಸಗಿಲ್ಲ ಎಂದು ವಿಕ್ರಮ್ ರಾಜ್ ಎ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿ ನ್ಯಾಯಾಧೀಶರಾದ ಮೋಹನ ಜೆ.ಎಸ್. ತೀರ್ಪು ನೀಡಿದ್ದು, ಕೊಲೆ ಕೃತ್ಯ ಸಾಬೀತಾಗಿದ್ದರೂ ಆರೋಪಿ ಅಪರಾಧಿಕ ಹೊಣೆಯಿಂದ ಮುಕ್ತ ಎಂದು ಹೇಳಿದ್ದಾರೆ. ನಂತರ ಆರೋಪಿಯನ್ನು ನಿಮ್ಹಾನ್ಸ್‌ಗೆ (NIMHANS) ಕಳುಹಿಸಲು ಜೈಲು ಅಧೀಕ್ಷಕರಿಗೆ ಆದೇಶ ನೀಡಿದ್ದಾರೆ.
