Aluminium: ಇತ್ತೀಚಿನ ದಿನಗಳಲ್ಲಿ ಹೆಂಗಸರು ತಮ್ಮ ಮನೆಯಲ್ಲಿರುವ ಅಡುಗೆಮನೆಯ ಪಾತ್ರಗಳನ್ನು ಬದಲಾಯಿಸುತ್ತಿದ್ದಾರೆ. ಅಂದರೆ ಅಲುಮಿನಿಯಂ ಪಾತ್ರೆಗಳ ಬದಲಿಗೆ ಸ್ಟೀಲ್, ಕಬ್ಬಿಣ ಅಥವಾ ತಾಮ್ರದ ಪಾತ್ರೆಗಳನ್ನು ತಂದು ಇಡುತ್ತಿದ್ದಾರೆ. ಕಾರಣ ಅಲ್ಯುಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತದೆ ಎಂಬ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಹಾಗಿದ್ರೆ ಇದು ಸತ್ಯವೇ? ಈ ಕುರಿತು ತಜ್ಞರು ಏನು ಹೇಳುತ್ತಾರೆ?
ಹೌದು, ಮನೆಗಳಲ್ಲಿ ಅಲ್ಯುಮಿನಿಯಂ ಪಾತ್ರೆಗಳು ಮಾಯವಾಗುತ್ತಿವೆ. ಈ ಪಾತ್ರೆಗಳಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ಕ್ಯಾನ್ಸರ್ ಬರುತ್ತದೆ, ಅಡುಗೆಯ ವಿಷವಾಗುತ್ತದೆ ಎಂಬ ವದಂತಿ ಎಲ್ಲೆಡೆ ಹಬ್ಬುತ್ತಿದೆ. ಈ ಬಗ್ಗೆ ಕ್ಯಾನ್ಸರ್ ಸರ್ಜನ್ ಡಾ. ಜಯೇಶ್ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾತನಾಡಿದ್ದಾರೆ. ಅಲ್ಲಿ ʼಬಿಸಿ ಆಹಾರವನ್ನ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಇಡುವುದು ಸುರಕ್ಷಿತವಾ? ವಿಷಕಾರಿಯಾ?-ನಾವು ಈ ಫಾಯಿಲ್ಗಳನ್ನ ಪ್ರತಿದಿನ ಲಂಚ್ ಪ್ಯಾಕ್ ಮಾಡಲು, ಆಹಾರಗಳನ್ನ ಸಂಗ್ರಹಿಸಿ ಇಡಲು ಬಳಸುತ್ತೇವೆ. ಆದರೆ ವಿಷಕಾರಕ, ಕಿಡ್ನಿಗೆ ಹಾನಿ ಮಾಡುತ್ತದೆ ಎಂಬ ರೂಮರ್ಗಳು ಇವೆ. ಹಾಗಾದರೆ, ನಿಮ್ಮ ನೆಚ್ಚಿನ ಅಡುಗೆಮನೆಯ ಮುಖ್ಯ ಆಹಾರವು ನಿಮಗೆ ರಹಸ್ಯವಾಗಿ ಹಾನಿ ಮಾಡುತ್ತಿದೆಯೇ? ಇದರ ಬಗೆಗಿನ ಸತ್ಯಗಳನ್ನ ತಿಳಿದುಕೊಳ್ಳೋಣʼ ಎಂದು ಅವರು ಕ್ಯಾಪ್ಷನ್ ಬರೆದು ವಿಡಿಯೊ ಮಾಡಿದ್ದಾರೆ.
ಅಲ್ಯೂಮಿನಿಯಂ ಎಂಬುದು ಭೂಮಿ ಮೇಲಿನ ಒಂದು ಸಾಮಾನ್ಯ ಲೋಹ. ಇದು ತುಂಬ ಹಗುರವಾಗಿರುತ್ತದೆ. ಸೀಸ, ಪಾದರಸ, ಕ್ಯಾಡ್ಮಿಯಮ್, ಆರ್ಸೆನಿಕ್, ಕ್ರೋಮಿಯಂ, ನಿಕಲ್, ಕೋಬಾಲ್ಟ್, ತಾಮ್ರ, ಸತು, ತವರ, ಥಾಲಿಯಮ್, ವೆನಾಡಿಯಮ್, ಆಂಟಿಮನಿ ಮತ್ತು ಬಿಸ್ಮತ್ಗಳು ಅಲ್ಯೂಮಿನಿಯಂಗೆ ಹೋಲಿಸಿದರೆ ಭಾರವಾಗಿ ಇರುತ್ತವೆ. ಅಲ್ಯೂಮಿನಿಯಂ ಲೋಹವು ನೀವು ಬೇಯಿಸುವ ಆಹಾರದಿಂದ ರಿಯಾಕ್ಟ್ ಆಗುವುದಿಲ್ಲ. ಆದರೆ ನೀವು ಈ ಪಾತ್ರೆಯಲ್ಲಿ ಬೇಯಿಸುವಾಗ, ಫಾಯಿಲ್ಗಳಲ್ಲಿ ಬಿಸಿಬಿಸಿ ಆಹಾರಗಳನ್ನ ಕಟ್ಟಿದಾಗ ತುಂಬ ಸಣ್ಣ ಪ್ರಮಾಣದ ಅಲ್ಯೂಮಿನಿಯಂ ಅಂಶವು ಆಹಾರಕ್ಕೆ ಸೇರ್ಪಡೆಯಾಗುತ್ತದೆ. ಆದರೆ ಈ ಅಂಶಗಳನ್ನ ನಿಮ್ಮ ಕಿಡ್ನಿಯು ಹೊರಹಾಕುತ್ತದೆ. ತುಂಬ ಹಗುರವಾದ ಲೋಹ ಆಗಿದ್ದರಿಂದ, ಅದು ದೇಹದಲ್ಲಿ ಹಾಗೇ ಉಳಿಯುವುದಿಲ್ಲ ಎಂದು ಕ್ಯಾನ್ಸರ್ ಸರ್ಜನ್ ಡಾ. ಜಯೇಶ್ ಶರ್ಮಾ ತಿಳಿಸಿದ್ದಾರೆ.
ಇನ್ನು ಅಲ್ಯೂಮಿನಿಯಂ ವಿಷಕಾರಿ ಅಲ್ಲ ಎಂದು ಡಾ. ಜಯೇಶ್ ಹೇಳಿಲ್ಲ. ಆದರೆ ಕ್ಯಾನ್ಸರ್ಕಾರಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಕ್ಯಾನ್ಸರ್ ಕಾರಕ ಎಂದು ಪಟ್ಟಿ ಮಾಡಲಾಗಿಲ್ಲ. “ಒಬ್ಬ ಸರಾಸರಿ ಭಾರತೀಯ 60-80 ಮಿಲಿ ಗ್ರಾಂ ಅಲ್ಯೂಮಿನಿಯಂ ಸೇವಿಸಿದರೆ, ಅದು ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ, ಮತ್ತು ಸಾಮಾನ್ಯ ಆಹಾರದ ಮೂಲಕ ಆ ಪ್ರಮಾಣದ ಅಲ್ಯೂಮಿನಿಯಂ ನಮ್ಮ ದೇಹವನ್ನ ತಲುಪೋದು ತುಂಬ ಕಷ್ಟʼ ಎಂದೂ ಹೇಳಿದ್ದಾರೆ. ಹೀಗಾಗಿ ಮನೆಯಲ್ಲಿ ಅಡುಗೆ ಮಾಡುವವರು ಅಲ್ಯೂಮಿನಿಯಂ ಪಾತ್ರೆಯನ್ನು ಬಳಸುತ್ತಿದ್ದರೆ ಯಾವುದೇ ಕಾರಣಕ್ಕೂ ಟೆನ್ಶನ್ ಮಾಡುವ ಅಗತ್ಯವಿಲ್ಲ. ಅದರಲ್ಲೂ ಮಹಿಳೆಯರು ಯಾವುದೇ ಕಾರಣಕ್ಕೂ ತಮ್ಮ ಮನೆಯ ಗಂಡಸರನ್ನು ಅಲುಮಿನಿಯಂ ಪಾತ್ರೆಯ ಬದಲು ಸ್ಟೀಲ್ ಪಾತ್ರೆಗಳನ್ನು ಕೊಂಡುಕೊಂಡು ಬನ್ನಿ ಎಂದು ತಲೆ ತಿನ್ನುವ ಅಗತ್ಯವೂ ಇಲ್ಲ.
