Prajwal Revanna : ವ್ಯಕ್ತಿಯೊಬ್ಬರ ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂಬ ತೀರ್ಪು ಪ್ರಜ್ವಲ್ ರೇವಣ್ಣ ಅವರಿಗೆ ಬಿಡುಗಡೆಯ ಭಾಗ್ಯವನ್ನು ಒದಗಿಸುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ.
ಹೌದು, ಲೈಂಗಿಕವಾಗಿ ಸಹಕರಿಸದ ವಿಧವೆಯೊಬ್ಬರಿಗೆ ಬೆಂಕಿ ಇಟ್ಟ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ವೇಳೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಗಳಾದ ಅಹಸಾನುದ್ದೀನ್ ಅಮಾನುಲ್ಲಾಹ್ ಮತ್ತು ಕೆ.ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠವು, ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ. ಸೆಷನ್ಸ್ ಕೋರ್ಟ್‌ಗಳಿಗೆ ಅಂಥ ಅಧಿಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ನ ಈ ತೀರ್ಪು ಪ್ರಜ್ವಲ್ ರೇವಣ್ಣ ಅವರಿಗೆ ಹೊಸ ಆಶಾಭಾವನೆಯನ್ನು ಹುಟ್ಟಿಸಿದೆ.
ಕಾರಣ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್ 2025ರಲ್ಲಿ ದೋಷಿ ಎಂದು ಘೋಷಿಸಿತ್ತು. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧ ಸಾಬೀತಾದ ಕಾರಣ, ನ್ಯಾಯಾಲಯವು ಅವರಿಗೆ ಜೀವಿತಾವಧಿ ಕಠಿಣ ಜೈಲು ಶಿಕ್ಷೆ ಮತ್ತು 11 ಲಕ್ಷ ರೂ.ಗೂ ಅಧಿಕ ದಂಡ ವಿಧಿಸಿ ಆದೇಶ ಹೊರಡಿಸಿತ್ತು.
ವಿಶೇಷ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈ ಪ್ರಕರಣದ ಗಂಭೀರತೆ ಮತ್ತು ವಿಚಾರಣಾ ನ್ಯಾಯಾಲಯವು ಪ್ರಬಲ ಸಾಕ್ಷ್ಯಗಳ ಆಧಾರದ ಮೇಲೆ ನೀಡಿರುವ ಜೀವಾವಧಿ ಶಿಕ್ಷೆಯ ತೀರ್ಪನ್ನು ಪರಿಗಣಿಸಿದ ನ್ಯಾಯಮೂರ್ತಿಗಳ ವಿಭಾಗೀಯ ಪೀಠವು, ಶಿಕ್ಷೆಯನ್ನು ಅಮಾನತುಗೊಳಿಸಲು ನಿರಾಕರಿಸಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಇದೀಗ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯವು ಒಬ್ಬ ವ್ಯಕ್ತಿಗೆ ಆತನ ಜೀವಿತಾವಧಿ ವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂದು ಹೇಳಿರುವುದು ಪ್ರಜ್ವಲ್ ರೇವಣ್ಣ ಅವರಿಗೆ ಬಿಡುಗಡೆಯ ಕುರಿತು ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
