ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 40 ದಿನದ ನವಜಾತ ಗಂಡು ಶಿಶು ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೊಂದು ಮರ್ಯಾದೆ ಹತ್ಯೆ ಶಂಕೆ ವ್ಯಕ್ತವಾಗಿದ್ದು, ಶಿಶುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿರಬಹುದೆಂಬ ಆರೋಪ ಕೇಳಿ ಬಂದಿದೆ. ಅಪ್ರಾಪ್ತ ಮೊಮ್ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ ಹೊಂದಿದ್ದು, ಅನ್ಯಕೋಮಿಗೆ ಸೇರಿದ ಅಜ್ಜಿ ಮೊಮ್ಮಗಳ 40 ದಿನದ ನವಜಾತ ಶಿಶುವನ್ನು ಕೊಂದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಡಿ.21 ರಂದು ದಂಪತಿಗೆ ಜನಿಸಿದ್ದ ಗಂಡು ಮಗು ಮೃತಪಟ್ಟಿದೆ.
ಮಗು ಸತ್ತ ಸಮಯದಲ್ಲಿ ಅಜ್ಜಿ ಬಳಿ ಇತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಅಜ್ಜಿ ವಾದ ಮಾಡಿದ್ದಾಳೆ ಎನ್ನಲಾಗಿದೆ. 17 ವರ್ಷದ ಅಪ್ರಾಪ್ತ ಬಾಲಕಿ, ಚೇಳೂರು ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾಳೆ.
ಈ ದೂರಿನ ಆಧಾರದ ಮೇಲೆ ಬಿಎನ್ಎಸ್ 194 ಸೆಕ್ಷನ್ ಅಡಿ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ನವಜಾತ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಚೇಳೂರು ತಹಶೀಲ್ದಾರ್ ಶ್ವೇತಾ ಅವರ ನೇತೃತ್ವದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ.
