ಮೈಸೂರು: ನೈಟ್ರೋಜನ್ ಗ್ಯಾಸ್ ಸ್ಫೋಟಗೊಂಡು ಓರ್ವ ಸಾವಿಗೀಡಾಗಿರುವ ಘಟನೆ ಮೈಸೂರು ಅರಮನೆ ಮುಂಭಾಗದಲ್ಲಿ ನಡೆದಿದೆ. ಇಂದು ರಾತ್ರಿ (ಡಿ.25) ಪ್ಯಾಲೆಸ್ ಮುಂಭಾಗ ಬಲೂನ್‌ಗೆ ಗ್ಯಾಸ್ ತುಂಬಿಸುವಾಗ ಸ್ಫೋಟವಾಗಿದ್ದು, ಸಿಲಿಂಡರ್ ಛಿದ್ರ ಛಿದ್ರವಾಗಿದೆ.
ಘಟನಾ ಸ್ಥಳಕ್ಕೆ ಕೆ ಆರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸ್ಫೋಟಕ್ಕೆ ಜನರು ಗಾಬರಿಗೊಂಡಿದ್ದಾರೆ.
ಅರಮನೆಯ ಜಯ ಮಾರ್ತಾಂಡ ಗೇಟ್ ಬಳಿ ಈ ಘಟನೆ ನಡೆದಿದ್ದು, ಬಲೂನ್‌ಗೆ ಗ್ಯಾಸ್ ತುಂಬುವ ಸಂದರ್ಭ ಬ್ಲಾಸ್ಟ್ ಆಗಿದೆ. ಓರ್ವನ ದೇಹ ಛಿದ್ರ ಛಿದ್ರಗೊಂಡಿದೆ. ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಬಲೂನ್ ಮಾರುತ್ತಿದ್ದ ವ್ಯಕ್ತಿ ಸಾವಿಗೀಡಾಗಿದ್ದು, ಬೆಂಗಳೂರು ಮೂಲಕ ಲಕ್ಷ್ಮಿ ಎನ್ನುವವರ ಸ್ಥಿತಿ ಗಂಭೀರವಾಗಿದೆ. ಇನ್ನು ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ, ಕೋಲ್ಕತ್ತಾ ಮೂಲದ ಶಾಹಿನಾ ಶಬ್ಬಿರ್ , ರಾಣೆಬೆನ್ನೂರು ಮೂಲದ ಕೊಟ್ರೇಶ್ ಎಂಬುವರಿಗೂ ಗಾಯಗಳಾಗಿದ್ದು, ಸದ್ಯ ಇವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದಾಗ ಕೂಗಳತೆ ದೂರದಲ್ಲಿ ಪೊಲೀಸರು ಇದ್ದಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೈಸೂರು ಅರಮನೆ ಹಾಗೂ ನಗರದ ಸುತ್ತಮುತ್ತ ನೈಟ್ರೋಜನ್ ಬಲೂನ್ ಮಾರಾಟ ಎಷ್ಟು ಸುರಕ್ಷಿತ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
