Bengaluru Airport Parking: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 1 ರಲ್ಲಿ ಜಾರಿಗೊಳಿಸಲಾದ ನೂತನ ಪಿಕ್-ಅಪ್ ಮತ್ತು ಕರ್ಬ್‌ಸೈಡ್ ವ್ಯವಸ್ಥೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಬಿಐಎಎಲ್ (BIAL) ಕೆಲವು ಪ್ರಮುಖ ತಿದ್ದುಪಡಿಗಳನ್ನು ತಂದಿದೆ.
ಪ್ರಯಾಣಿಕರಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಉಚಿತ ಪಾರ್ಕಿಂಗ್ ಅವಧಿಯನ್ನು ವಿಸ್ತರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಉದ್ದೇಶದಿಂದ, ಟರ್ಮಿನಲ್ 1 ರ ಆಗಮನದ ಪಿಕಪ್ ಪ್ರದೇಶಗಳಾದ P3 ಮತ್ತು P4 ನಲ್ಲಿ ಈ ಹಿಂದೆ ಇದ್ದ 10 ನಿಮಿಷಗಳ ಉಚಿತ ಪಾರ್ಕಿಂಗ್ ಅವಧಿಯನ್ನು ಈಗ 15 ನಿಮಿಷಗಳಿಗೆ ವಿಸ್ತರಿಸಲಾಗಿದೆ. ಈ ಹೊಸ ನಿಯಮವು ಡಿಸೆಂಬರ್ 26, 2025 ರಿಂದಲೇ ಜಾರಿಗೆ ಬರಲಿದೆ.
ಇದರಿಂದ ವಿಮಾನ ನಿಲ್ದಾಣಕ್ಕೆ ತಮ್ಮ ಕುಟುಂಬಸ್ಥರನ್ನು ಬರಮಾಡಿಕೊಳ್ಳಲು ಬರುವ ಸಾರ್ವಜನಿಕರಿಗೆ ಹೆಚ್ಚಿನ ಕಾಲಾವಕಾಶ ದೊರೆತಂತಾಗಿದೆ.ಪಿಕ್-ಅಪ್ ಪ್ರದೇಶಗಳಿಗೆ ತಲುಪಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ರತಿ 7 ನಿಮಿಷಕ್ಕೊಮ್ಮೆ ಲಭ್ಯವಿರುವ ಶಟಲ್ ಬಸ್‌ಗಳು, 6 ಕಾರುಗಳು ಹಾಗೂ 10 ಬಗ್ಗಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ವಿಶೇಷವಾಗಿ ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು ಮತ್ತು ವಿಶೇಷ ಚೇತನರಿಗೆ ಈ ಬಗ್ಗಿ ಸೇವೆಗಳು ಹೆಚ್ಚಿನ ನೆರವು ನೀಡಲಿವೆ. ಜಾಗತಿಕ ಮಟ್ಟದ ವಿಮಾನ ನಿಲ್ದಾಣಗಳಲ್ಲಿರುವ ಮಾದರಿಯನ್ನೇ ಇಲ್ಲಿ ಅಳವಡಿಸಲಾಗಿದ್ದು, ಶೇ. 95 ರಷ್ಟು ಪ್ರಯಾಣಿಕರಿಗೆ ಇದು ಅನುಕೂಲಕರವಾಗಲಿದೆ ಎಂದು ಬಿಐಎಎಲ್ ತಿಳಿಸಿದೆ.
