8th Pay Commission: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು, ಬಹುನಿರೀಕ್ಷಿತ 8ನೇ ಕೇಂದ್ರ ವೇತನ ಆಯೋಗ(ಸಿಪಿಸಿ) ರಚನೆಗೆ ಅನುಮೋದನೆ ನೀಡಿದೆ. ಈ ಆಯೋಗವು ರಚನೆಯಾದ 18 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ನೀಡಲಾಗಿದೆ. ಈಗ ಎಂಟನೇ ವೇತನ ಆಯೋಗ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಹಾಗಿದ್ರೆ ಈ ವೇತನ ಯೋಗ ಜಾರಿಯಾದರೆ, ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತೆ?
ಮೂಲ ವೇತನದಲ್ಲಿನ ಹೆಚ್ಚಳದ ಮೊತ್ತವು ಫಿಟ್‌ಮೆಂಟ್ ಅಂಶ ಮತ್ತು ಡಿಎ ವಿಲೀನವನ್ನು ಅವಲಂಬಿಸಿರುತ್ತದೆ. 7 ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ 2.57 ಆಗಿತ್ತು. 8 ನೇ ವೇತನ ಆಯೋಗದಲ್ಲಿ, ಇದು 2.46 ಆಗಿರಬಹುದು. ಪ್ರತಿ ವೇತನ ಆಯೋಗದಲ್ಲಿ ಡಿಎ ಶೂನ್ಯದಿಂದ ಪ್ರಾರಂಭವಾಗುತ್ತದೆ. ಏಕೆಂದರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು ಹೊಸ ಮೂಲ ವೇತನವನ್ನು ಈಗಾಗಲೇ ಹೆಚ್ಚಿಸಲಾಗಿದೆ. ಇದರ ನಂತರ, ಡಿಎ ಮತ್ತೆ ಕ್ರಮೇಣ ಹೆಚ್ಚಾಗುತ್ತದೆ. ಇದನ್ನು ಉದಾಹರಣೆಯೊಂದಿಗೆ ನೋಡುವುದಾದರೆ ಈ ಕೆಳಗೆ ನೀಡಲಾಗಿದೆ.
7 ನೇ ವೇತನ ಆಯೋಗದ ಪ್ರಕಾರ ಪ್ರಸ್ತುತ ಸಂಬಳ:
ಮೂಲ ವೇತನ: ₹35,400
DA (55%): ₹19,470
HRA (ಮೆಟ್ರೋ, 27%): ₹9,558
ಒಟ್ಟು ಸಂಬಳ: ₹64,428
8ನೇ ವೇತನ ಆಯೋಗದಲ್ಲಿ ಹೊಸ ವೇತನ ಹೀಗಿರುತ್ತದೆ:
ಹೊಸ ಮೂಲ ವೇತನ: ₹35,400 x 2.46 = ₹87,084
DA: 0% (ಮರುಹೊಂದಿಸಲಾಗುತ್ತದೆ)
HRA (27%): ₹87,084 x 27% = ₹23,513
ಒಟ್ಟು ಸಂಬಳ: ₹87,084 + ₹23,513 = ₹1,10,597
ಆಯೋಗವನ್ನು ಜನವರಿ 16, 2025 ರಂದು ಘೋಷಿಸಲಾಗಿದ್ದು, ಅದರ ಕಾರ್ಯವ್ಯಾಪ್ತಿ (ToR) ನವೆಂಬರ್ ಮೊದಲ ವಾರದಲ್ಲಿ ಹೊರಡಿಸಲಾಯಿತು. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ರಂಜನಾ ದೇಸಾಯಿ ಅವರು ಈ ಬಾರಿಯ 8ನೇ ಆಯೋಗದ ಅಧ್ಯಕ್ಷರಾಗಿದ್ದಾರೆ. ಪಂಕಜ್ ಜೈನ್ ಕಾರ್ಯದರ್ಶಿ-ಸದಸ್ಯರಾಗಿ ಹಾಗೂ ಐಐಎಂ ಬೆಂಗಳೂರಿನ ಪ್ರಾಧ್ಯಾಪಕ ಪುಲಕ್ ಘೋಷ್ ಸದಸ್ಯರಾಗಿದ್ದಾರೆ. 18 ತಿಂಗಳಲ್ಲಿ ವರದಿ ಸಲ್ಲಿಸಬೇಕಿದ್ದು, ಆದ್ದರಿಂದ ವೇತನ ಆಯೋಗದ ಘೋಷಣೆ 2027 ರ ಅಂತ್ಯ ಅಥವಾ 2028 ರ ಆರಂಭದಲ್ಲಾಗುವ ಸಾಧ್ಯತೆಯಿದೆ.
