ಉಡುಪಿ: ಕರ್ನೂಲ್‌ನಲ್ಲಿ ನಡೆದ ಖಾಸಗಿ ಬಸ್ಸಿನ ಬೆಂಕಿ ದುರಂತದ ನಂತರ ರಾಜ್ಯದಲ್ಲಿ ಬಸ್ಸುಗಳಲ್ಲಿ ಪ್ರಯಾಣಿಕರ ಲಗೇಜ್, ವಸ್ತುಗಳನ್ನು ಹೊರತುಪಡಿಸಿ ಯಾವುದೇ ಇತರ ಸಾಮಾನುಗಳ ಸಾಗಾಟಕ್ಕೆ ಅವಕಾಶವಿಲ್ಲ ಎಂದು ಸರಕಾರದಿಂದ ಆದೇಶ ಹೊರಡಿಸಲಾಗಿದೆ.
ಬೆಂಕಿ ದುರಂತಕ್ಕೊಳಗಾದ ಬಸ್ಸಿನಲ್ಲಿ ಹೆಚ್ಚು ಲಗೇಜ್ ಹಾಕಿದ್ದ ಕುರಿತು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ಕೋವಿಡ್ ಸಂದರ್ಭಗಳಲ್ಲಿ ದೀರ್ಘ ಮಾರ್ಗದ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಐಶಾರಾಮಿ ಬಸ್‌ಗಳನ್ನು ಖರೀದಿಸಿಲ್ಲ. ಈಗ 70 ಬಸ್‌ಗಳ ಟೆಂಡರ್ ಪ್ರಕ್ರಿಯೆ ಮುಗಿದಿವೆ. ತಿಂಗಳೊಳಗೆ ಬಸ್‌ಗಳು ಇಲಾಖೆಗೆ ದೊರೆಯುತ್ತವೆ ಎಂದು ಸಿಎಂ ತಿಳಿಸಿದ್ದಾರೆ. ಈ ಪೈಕಿ ಮಂಗಳೂರಿಗೆ ಆದ್ಯತೆ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ರಾಜ್ಯ ಸಾರಿಗೆ ನಿಗಮ ಮಂಗಳೂರು ವಿಭಾಗದದಿಂದ ಬೈಂದೂರಿನಲ್ಲಿ ನೂತವಾಗಿ ನಿರ್ಮಿಸಲಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. 900 ಹೊಸ ಬಸ್‌ಗಳನ್ನು ಖರೀದಿಸಲಿದ್ದು, 15 ಜಿಲ್ಲೆಗಳಲ್ಲಿ ಉಡುಪಿ, ದ.ಕ ಗೆ ಆದ್ಯತೆ ಮೇಲೆ ಕೊಡುತ್ತೇವೆ ಎಂದರು.
