Uttar pradesh: ನಾಯಿ ಕಚ್ಚಿ ಸತ್ತು ಹೋದ ಎಮ್ಮೆ ಹಾಲಿನಿಂದ ತಯಾರಿಸಿದ ರೈತಾ (ಮೊಸರಿನ ಖಾದ್ಯ) ಸೇವಿಸಿದ ಉತ್ತರ ಪ್ರದೇಶದ ಬುಡೌನ್‌ನ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳಲ್ಲಿ ರೇಬೀಸ್ ರೋಗದ ಆತಂಕ ಮೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ನೀಡಲಾಗಿದೆ.
ಗ್ರಾಮಸ್ಥರ ಪ್ರಕಾರ, ಡಿಸೆಂಬರ್ 23ರಂದು ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಗ್ರಾಮಸ್ಥರಿಗೆ ರೈತಾ ಬಡಿಸಲಾಗಿತ್ತು. ಈ ರೈತಾವನ್ನು ಎಮ್ಮೆಯ ಹಾಲಿನಿಂದ ತಯಾರಿಸಲಾಗಿದೆ. ಎಮ್ಮೆ ಕೆಲವು ದಿನಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾಗಿದ್ದು, ಡಿ.26ರಂದು ಸಾವನ್ನಪ್ಪಿತ್ತು. ಇದರಿಂದ ತೀವ್ರ ಆತಂಕಗೊಂಡ ಗ್ರಾಮಸ್ಥರು ಉಜ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ.ಮುಖ್ಯ ವೈದ್ಯಾಧಿಕಾರಿ ಡಾ.ರಾಮೇಶ್ವರ ಮಿಶ್ರಾ ಪ್ರತಿಕ್ರಿಯಿಸಿ, “ಗ್ರಾಮದಲ್ಲಿ ಎಮ್ಮೆಯೊಂದು ಹುಚ್ಚು ನಾಯಿ ಕಡಿದು ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿದೆ ಎಂಬ ಮಾಹಿತಿ ಬಂದಿದೆ.
ಗ್ರಾಮಸ್ಥರು ಸೋಂಕಿತ ಎಮ್ಮೆಯ ಹಾಲಿನಿಂದ ತಯಾರಾಗಿದ್ದ ರೈತಾ ಸೇವಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಎಲ್ಲರಿಗೂ ರೇಬೀಸ್ ಇಂಜೆಕ್ಷನ್ ಪಡೆಯುವಂತೆ ಸೂಚಿಸಲಾಯಿತು. ಚಿಕಿತ್ಸೆಗಿಂತಲೂ ಸೋಂಕು ಹರಡದಂತೆ ತಡೆಗಟ್ಟುವುದು ಉತ್ತಮ ಕ್ರಮ. ಸೋಂಕಿನ ಸಂದೇಹವಿದ್ದ ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ. ಸಾಮಾನ್ಯವಾಗಿ ಹಾಲನ್ನು ಕುದಿಸಿದ ನಂತರ ರೇಬೀಸ್ ಬರುವ ಅಪಾಯವಿಲ್ಲ. ಆದರೆ ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಲಸಿಕೆ ಹಾಕಲಾಗಿದೆ” ಎಂದು ಅವರು ಮಾಹಿತಿ ನೀಡಿದರು.ಆರೋಗ್ಯ ಇಲಾಖೆಯ ಪ್ರಕಾರ, ಗ್ರಾಮದಲ್ಲಿ ಇಲ್ಲಿಯವರೆಗೆ ಯಾವುದೇ ರೋಗ ಹರಡಿಲ್ಲ. ಪರಿಸ್ಥಿತಿ ಸಾಮಾನ್ಯವಾಗಿದೆ. ಉಜ್ನಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೇಬೀಸ್ ನಿರೋಧಕ ಇಂಜೆಕ್ಷನ್ ಪಡೆಯಲು ಬಂದ ಎಲ್ಲರಿಗೂ ತಕ್ಷಣವೇ ಇಂಜೆಕ್ಷನ್ ನೀಡಲಾಗಿದೆ.
