Kogilu Layout : ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಸುಮಾರು 21ಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸಿರುವ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಕೇರಳ ಸರ್ಕಾರವು ಕೂಡ ಈ ವಿಚಾರವಾಗಿ ತೂರಿಸಿ ಈ ವಿವಾದವನ್ನು ಇನ್ನಷ್ಟು ದೊಡ್ಡದು ಮಾಡಿತ್ತು. ಇದೀಗ ಈ ವಿಚಾರ ರಾಜಕೀಯ ತಿರುಗುವುದನ್ನು ಪಡೆದುಕೊಂಡಿದ್ದು ಕೋಗಿಲು ಲೇಔಟ್ ನ ನಿವಾಸಿಗಳ ಪೌರತ್ವದ ಬಗ್ಗೆ ಎನ್ಐ ತನಿಖೆ ಆಗಬೇಕೆಂದು ಬಿಜೆಪಿ ಆಗ್ರಹಿಸಿದೆ.
ಹೌದು, ಯಲಹಂಕದ ಕೋಗಿಲು ಬಡಾವಣೆಯಲ್ಲಿ ಮನೆಗಳ ಧ್ವಂಸ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಳೆದಗ 25 ವರ್ಷಗಳಿಂದ ವಾಸವಿದ್ದೇವೆಂಬ ಸ್ಥಳೀಯರು ಹೇಳಿದ್ದರು. ಆದರೆ ಈ ಆರೋಪಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಯಾಟಲೈಟ್ ಫೋಟೋ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿತ್ತು. ಈ ಸ್ಯಾಟಲೈಟ್ ಫೋಟೋಗಳು 2016ರ ಮೊದಲು ಆ ಪ್ರದೇಶದಲ್ಲಿ ಯಾವುದೇ ಮನೆಗಳೂ ಇರಲಿಲ್ಲವೆಂಬುದನ್ನು ಸ್ಪಷ್ಟಪಡಿಸಿವೆ. ಈ ವಿಚಾರವನ್ನು ಬಿಜೆಪಿ ಕೂಡ ದೊಡ್ಡ ಮಟ್ಟದಲ್ಲಿ ಚರ್ಚಿಸಿತ್ತು.
ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮುಂತಾದವರು ಇಂದು ಕೋಗಿಲು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಬಗ್ಗೆ ಹಾಗೂ ಅವರ ಪೌರತ್ವದ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ ಸ್ಯಾಟಿಲೈಟ್ ವಿಚಾರವನ್ನು ಪ್ರಸ್ತಾಪಿಸಿ ನೀವೆಲ್ಲರೂ ತುಂಬಾ ಹಿಂದಿನಿಂದಲೂ ಇಲ್ಲಿ ಇದ್ದೀರಿ ಎಂಬುದಕ್ಕೆ ದಾಖಲೆ ಕೊಡಿ ಎಂದು ಅವರಲ್ಲಿ ಪ್ರಶ್ನೆ ಮಾಡಲಾಯಿತು. ಕೆಲವು ವಾಸ್ತವ ಸಂಗತಿಗಳನ್ನು ಅವರು ಕಲೆ ಹಾಕಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ, “ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್, ಮನೆ ತೆರವು ಪ್ರಕರಣದಲ್ಲಿ ಅಲ್ಲಿನ ನಿವಾಸಿಗಳ ಪೌರತ್ವದ ಬಗ್ಗೆ ಎನ್‌ಐಎ ತನಿಖೆ ಆಗಬೇಕು. ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ಟೋಪಿ ಸರ್ಕಾರವಾಗಿದೆ. ಕನ್ನಡಿಗರಿಗೆ ಟೋಪಿ ಹಾಕಿ ಮಿನಿ ಬಾಂಗ್ಲಾದೇಶ ಮಾಡಿದೆ. ಕರ್ನಾಟಕ ಮಿನಿ ಬಾಂಗ್ಲಾದೇಶ ಹಬ್ ಆಗಿದೆ. ಬೇರೆ ಬೇರೆ ರಾಜ್ಯದಿಂದ ಜನರು ಇಲ್ಲಿಗೆ ಬಂದಿದ್ದಾರೆ” ಎಂದು ಆರೋಪಿಸಿದರು.
ಅಲ್ಲದೆ ಇವರು ಯಾವಾಗ ಬಂದರು?, ಎಲ್ಲಿಂದ ಬಂದರು? ಅಂತ ಮಾಹಿತಿ ಇದೆ. ಒಂದು ವರ್ಷದ ಹಿಂದೆ ಯಾರು ಇರಲಿಲ್ಲ. ಈಗ ಇಲ್ಲಿ ಮನೆಗಳು ಇವೆ. ಡಿ.ಕೆ.ಶಿವಕುಮಾರ್ ಅವರು ಅಕ್ರಮ ಮನೆ ಒಡೆದು ಹಾಕುತ್ತೇವೆ ಅಂದರು. ಕರ್ನಾಟಕದಲ್ಲಿನ ಕನ್ನಡದ ಜನರಿಗೆ ಇವರು ಕರೆಂಟ್ ಕೊಡೋಕೆ ಆಗಿಲ್ಲ. ಇಲ್ಲಿರುವ ಎಲ್ಲರ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ದಾಖಲಾತಿ ಪರಿಶೀಲನೆ ಎನ್‌ಐಎಗೆ ವಹಿಸಿಬೇಕು. ಕರ್ನಾಟಕದಲ್ಲಿ 38 ಲಕ್ಷ ಜನ ಮನೆಗಾಗಿ ಕಾದು ಕುಳಿತಿದ್ದಾರೆ. ಅವರಿಗೆ ಕೊಡದೇ ಇವರಿಗೆ ಯಾಕೆ ಕೊಡುತ್ತೀರಿ?. ದಾಖಲಾತಿ ಪರಿಶೀಲನೆ ಆಗದೇ ಮನೆ ಕೊಡಬಾರದು. ಒಂದು ವೇಳೆ ಬೇರೆ ಅವರಿಗೆ ಇಟ್ಟಿರುವ ಮನೆ ಇವರಿಗೆ ಕೊಟ್ಟರೆ ಮನೆಗಾಗಿ ಕಾಯುತ್ತಿರುವ ಅವರನ್ನು ನಾವೇ ಈ ಮನೆಗಳಿಗೆ ನುಗ್ಗಿಸುತ್ತೇವೆ” ಎಂದು ಎಚ್ಚರಿಕೆ ಕೊಟ್ಟರು.
