Vittla: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇಪು ಗ್ರಾಮದ ಬಡಕೋಡಿ ಮನೆ ನಿವಾಸಿ ಗಣೇಶ @ ಗಣೇಶ ಪೂಜಾರಿ ವಿರುದ್ಧ ಹಲ್ಲೆ, ದೊಂಬಿ, ಕೊಲೆ ಯತ್ನ, ಜೂಜು ಸೇರಿದಂತೆ ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿದೆ.
ಈತನ ಚಟುವಟಿಕೆಗಳು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿವೆ ಎಂಬ ಹಿನ್ನೆಲೆ ವಿಟ್ಲ ಪೊಲೀಸ್ ಠಾಣಾಧಿಕಾರಿಗಳ ವರದಿಯನ್ನು ಆಧರಿಸಿ, ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ, ಮಂಗಳೂರು ಅವರು ಗಣೇಶ ಪೂಜಾರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಸನ ಜಿಲ್ಲೆಯ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವಂತೆ ಆದೇಶ ನೀಡಿದ್ದಾರೆ.
ಆದೇಶದಂತೆ ಆರೋಪಿಯನ್ನು ಪೊಲೀಸ್ ಭದ್ರತೆಯೊಂದಿಗೆ ಸುರಕ್ಷಿತವಾಗಿ ಆಲೂರು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
