ಬೆಂಗಳೂರು: ರಾಜ್ಯದಲ್ಲಿನ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಜರಾತಿ ಸಹಿತ ಋತುಚಕ್ರ ರಜೆ ನೀಡ ಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರಕಾರಕ್ಕೆ ಮನವಿ ಸಲ್ಲಿಸಿದೆ.
ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀತಿ ಜಾರಿಗೆ ತಂದಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಆಯೋಗವು, ವಿದ್ಯಾರ್ಥಿನಿಯರಿಗೂ ಹಾಜರಾತಿ ಸಹಿತ ಋತುಚಕ್ರ ರಜೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
”ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯದ ನಾನಾ ಕಾಲೇಜುಗಳ ವಿದ್ಯಾರ್ಥಿನಿಯರೊಂದಿಗೆ ‘ಶಿಕ್ಷಣದ ಜೊತೆಗಿದೆ ರಕ್ಷಣೆ’ ಎಂಬ ಕಾರ್ಯಕ್ರಮದ ಮೂಲಕ ಸಂವಾದ ನಡೆಸುತ್ತಿದೆ. ಈ ವೇಳೆ ವಿದ್ಯಾರ್ಥಿನಿಯರು ಋತುಚಕ್ರ ರಜೆಗೆ ಮನವಿ ಮಾಡಿದ್ದಾರೆ,” ಎಂದು ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ತಿಳಿಸಿದ್ದಾರೆ.
“ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಋತುಚಕ್ರದ ಸಮಯದಲ್ಲಿ ತರಗತಿಗಳಿಗೆ ಗೈರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ,” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
