ಬೆಳ್ತಂಗಡಿ (ದ.ಕ.): ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದ ನ್ಯಾಯಾಲಯ, ಈಗಾಗಲೇ ಎಸ್ಐಟಿ ನೀಡಿರುವ ಮಧ್ಯಂತರ ವರದಿಯನ್ನು ತಟಸ್ಥವಾಗಿರಿಸಿದೆ. ಪೂರ್ಣ ವರದಿಯನ್ನು ಸಲ್ಲಿಸಿದ ಬಳಿಕವೇ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರ ಮುಂದೆ ಶನಿವಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಾ ಪರ ಹೋರಾಟಗಾರರ ಪರವಾಗಿ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆರಾಜು ಅವರು ವಾದ ಮಂಡಿಸಿದರು.
ಎಸ್ಐಟಿ ಸಲ್ಲಿಸಿರುವ ವರದಿ ಅಪೂರ್ಣವಾಗಿದ್ದು, ಇದರ ಆಧಾರದ ಮೇಲೆ ಯಾರ ಮೇಲೆಯೂ ಕ್ರಮ ಕೈಗೊಳ್ಳಲು ಆದೇಶ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ, ಈ ಅಪೂರ್ಣ ವರದಿಯನ್ನು ತಟಸ್ಥ ಮಾಡಿ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ಧರ್ಮಸ್ಥಳ ಶ್ರೀಕ್ಷೇತ್ರದ ಪರವಾಗಿ ಸಂತ್ರಸ್ತರು ಎಂಬ ನೆಲೆಯಲ್ಲಿ ತಮಗೂ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಜ. 23 ಕ್ಕೆ ಮುಂದೂಡಿದೆ.
