Ballary : ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ, ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದರು. ಇದೀಗ ಮೃತಪಟ್ಟ ರಾಜಶೇಖರ್ ಕುಟುಂಬಕ್ಕೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು 25 ಲಕ್ಷ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಹೌದು, ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತ ಜಮೀರ್ ಅಹ್ಮದ್ ಖಾನ್, ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ಸಂದರ್ಭದಲ್ಲಿ ರಾಜಶೇಖರ್ ಅವರ ಕುಟುಂಬಕ್ಕೆ ತಾವು ವೈಯಕ್ತಿಕವಾಗಿ 25 ಲಕ್ಷ ಪರಿಹಾರವನ್ನು ನೀಡಿ, ರಾಜಶೇಖರ್ ಪತ್ನಿ ತುಳಸಿಗೆ ಆರ್ಥಿಕ ನೆರವಿನ ಹಣವನ್ನು ನೀಡಿದ್ದಾರೆ.
‘ರಾಜಶೇಖರ್ ನಿಧನದಿಂದ ಕುಟುಂಬ ಆಧಾರಸ್ತಂಭ ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ನಾನು, ಶಾಸಕ ಭರತ್ ರೆಡ್ಡಿ ಹಾಗೂ ಗಣೇಶ್ ಸೇರಿ ನೆರವಾಗಿದ್ದೇವೆ. ಸ್ಲಂ ಬೋರ್ಡ್ ವತಿಯಿಂದ ಅವರಿಗೆ ಸುಸಜ್ಜಿತ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದೇನೆ. ಪಕ್ಷದ ವತಿಯಿಂದಲೂ ಹೆಚ್ಚಿನ ನೆರವು ನೀಡಲಾಗುವುದು’ ಎಂದು ಜಮೀರ್ ಅಹಮದ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.
