ನೊಯ್ದಾ: ಮೊಬೈಲ್ ನೆಟ್ವರ್ಕ್ ಸಿಗ್ತಿಲ್ಲ ಎಂದು ಬಹುಮಹಡಿ ಕಟ್ಟಡದ ಮೇಲೆ ಹೋಗಿದ್ದ ವ್ಯಕ್ತಿ 17ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನೊಯ್ದಾದ ನಗರದ ಸೆಕ್ಟರ್ 104ರಲ್ಲಿ ಜರುಗಿದೆ. ದಿಲ್ಲಿಯ ಇಂಡಿಯನ್ ಆಯಿಲ್ ಕಾರ್ಪೊ ರೇಷನ್ (ಐಒಸಿ) ನಲ್ಲಿಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಅಜಯ್ ಗರ್ಗ್(55) ಮೃತಪಟ್ಟವರು.
ಗರ್ಗ್ ತಮ್ಮ ಪತ್ನಿಯೊಂದಿಗೆ ನೊಯ್ದಾದ ಎಟಿಎಸ್ ಒನ್ ಹ್ಯಾಮ್ಮೆಟ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಅಜಯ್ ಮತ್ತು ಅವರ ಪತ್ನಿ ಮೂಲತಃ ಉತ್ತರ ಪ್ರದೇಶದ ಕಾನ್ಸುರದವರು. “ಕರೆಯೊಂದನ್ನು ಸ್ವೀಕರಿಸಿದ ಅಜಯ್, ಫ್ಲಾಟ್ ಒಳಗೆ ಸರಿಯಾಗಿ ನೆಟ್ವರ್ಕ್ ಸಿಗ್ತಿಲ್ಲ ಎಂದು ಗೊಣಗಾಡುತ್ತಾ ಹೊರಗಡೆ ಹೋದರು. ನೆಟ್‌ವರ್ಕ್ ಸಿಗಲಿ ಎಂದು ಮುಂದೆ ಸಾಗುತ್ತಾ, ಆಯತಪ್ಪಿ 17ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಅಜಯ್ ಅವರು ಕೆಳಗೆ ಬಿದ್ದಿರುವುದನ್ನು ಕಂಡು ಸೊಸೈಟಿಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿ ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿ ದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ. ಸೊಸೈಟಿ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ
