ಸೂಲಿಬೆಲೆಯಲ್ಲಿ ಮಗು ಬಲಿ ಯತ್ನದ ಆರೋಪ ಘಟನೆ ಸಂಬಂಧ ಕಾನೂನು ಬಾಹಿರವಾಗಿ ಮಗು ಮಾರಾಟ ಮಾಡಿದ್ದ ತಾಯಿ ಮತ್ತು ಖರೀದಿಸಿದ ವ್ಯಕ್ತಿಯನ್ನು ಸೋಮವಾರ ಸೂಲಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಮಗು ಮಾರಾಟ ಮಾಡಿದ್ದ ತಾಯಿ ಕೋಲಾರ ಮೂಲದ ಮಂಜುಳಾ ಹಾಗೂ ಮಗು ಖರೀದಿಸಿದ ಸೂಲಿಬೆಲೆಯ ಇಮ್ರಾನ್ ಬಂಧಿತ ಆರೋಪಿಗಳು.
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಮಲ್ಲೇಶ್ ಸೋಮವಾರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಗು ಮಾರಾಟದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾರಾಟದ ವೇಳೆ ವಿಡಿಯೋದಲ್ಲಿರುವ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಮಗು ಮಾರಾಟ ಮಾಡಿದ್ದ ತಂದೆ, ತಾಯಿ, ಮಗು ಖರೀದಿಸಿದ ಇಮ್ರಾನ್ ದಂಪತಿ ಹಾಗೂ ಮಗುವನ್ನು ತಮ್ಮದಾಗಿಸಿಕೊಳ್ಳಲು ಇಮ್ರಾನ್ ದಂಪತಿಗೆ ದಾಖಲೆಗಳನ್ನು ಮಾಡಿಸಲು ಸಹಕರಿಸಿದ ಆಸ್ಪತ್ರೆ ವೈದ್ಯರು, ಮಗು ಜನನ ಪ್ರಮಾಣಪತ್ರಕ್ಕೆ ಸಹಕರಿಸಿದ ನಾಡ ಕಚೇರಿ ಜನನ ನೋಂದಣಿ ಅಧಿಕಾರಿ, ನೋಟರಿ ದಾಖಲೆ ನೀಡಿದ ವಕೀಲರ ವಿರುದ್ಧ ಎಫ್ಐಆರ್ ದಾಖಲಾಗಿದೆ.
