Ballary : ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ, ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದರು. ರಾಜಶೇಖರ್ ಅವರ ಪೋಸ್ಟ್ ಮಾರ್ಟಂ ಅನ್ನು ಎರಡು ಬಾರಿ ನಡೆಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಗಲಾಟೆ ಶುರುವಾಗಿದ್ದು ಹೇಗೆ ಎಂಬ ವಿಚಾರ ರಿವಿಲ್ ಆಗಿದೆ.
ಹೌದು, ಗಣಿನಾಡು ಬಳ್ಳಾರಿಯರಿಯಲ್ಲಿ ತಡರಾತ್ರಿ ನಡೆದ ಬ್ಯಾನರ್ ವಿಚಾರದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರಂಭಿಕ ಹಂತದ ದೃಶ್ಯಗಳು ಬಹಿರಂಗವಾಗಿದ್ದು, ಇಡೀ ಗಲಾಟೆಗೆ ಹೊಸ ತಿರುವು ಪಡೆದುಕೊಂಡಿದೆ. ಗಲಾಟೆಗೆ ಮುಖ್ಯ ಕಾರಣ ಬಿಜೆಪಿ ಬೆಂಬಲಿಗರು ಎಂಬುದನ್ನು ಕಾಂಗ್ರೆಸ್ ಮುಖಂಡರು ವಿಡಿಯೋ ಮುಖಾಂತರ ಸಾಕ್ಷಿ ತೋರಿಸಿ ಪ್ರಬಲವಾಗಿ ಆರೋಪಿಸಿದ್ದಾರೆ.
ಗಲಾಟೆ ಶುರುವಾಗಿದ್ದು ಹೇಗೆ?
ಜನಾರ್ದನ ರೆಡ್ಡಿ ಮನೆ ಕಾಂಪೌಂಡ್ ಹೊರಭಾಗದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸಿದ್ದರು. ರಸ್ತೆ ಬದಿಯಲ್ಲಿ ಅಳವಡಿಸಿದ್ದ ಈ ಬ್ಯಾನರ್ ಗಳನ್ನು ಉದ್ದೇಶಪೂರ್ವಕವಾಗಿ ರೆಡ್ಡಿ ಬೆಂಬಲಿಗರು ಕಿತ್ತು ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಮತ್ತೆ ಅದೇ ಜಾಗದಲ್ಲಿ ಬ್ಯಾನರ್ ಅಳವಡಿಸಲು ಮುಂದಾದಾಗ ಗಲಾಟೆ ತೀವ್ರಗೊಂಡಿತ್ತು. ಹೀಗೆ ಕ್ಷಣಾರ್ಧದಲ್ಲಿ ಎರಡೂ ಕಡೆಯಿಂದ ಸಾವಿರಾರು ಜನ ಸೇರಿ ಪರಿಸ್ಥಿತಿ ಗಲಭೆಯಾಗಿ ಮಾರ್ಪಟ್ಟಿದ್ದು, ತಳ್ಳಾಟ- ನೂಕಾಟ ಏರ್ಪಟ್ಟಿತ್ತು.
ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ್ದ ಮಹಿಳೆ
ಈ ನಡುವೆ ಬಿಜೆಪಿ ಕಾರ್ಯಕರ್ತೆಯೊಬ್ಬರು ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ ವೀಡಿಯೋವೊಂದು ವೈರಲ್ ಆಗಿದೆ. ಎರಡು ಪಕ್ಷಗಳ ಬೆಂಬಲಿಗರ ನಡುವೆ ಗಲಭೆ ಏರ್ಪಟ್ಟಾಗಲೇ ಈ ಘಟನೆಯೂ ನಡೆದಿದ್ದು, ಪೊಲೀಸರು ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಖಾರಿದ ಪುಡಿ ಎರಚಿದ್ದು, ಉರಿ ತಾಳದ ವ್ಯಕ್ತಿ ಮೈಮೇಲೆ ನೀರು ಹಾಕಿಕೊಂಡ ದೃಶ್ಯಗಳೂ ಸಹ ಹೊರಬಂದಿವೆ.
