ಹುಬ್ಬಳ್ಳಿ: ಕೇಶ್ವಾಪುರ ಪೊಲೀಸರು ಬಿಜೆಪಿ ಕಾರ್ಯಕರ್ತೆಯರೊಬ್ಬರಿಗೆ ಬಟ್ಟೆ ಬಿಚ್ಚಿ ಥಳಿಸಿದ ಆರೋಪ ಕೇಳಿಬಂದಿರುವ ಕುರಿತು ವರದಿಯಾಗಿದೆ. ಕಾಂಗ್ರೆಸ್ನ ನಗರ ಪಾಲಿಕೆ ಸದಸ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಈ ರೀತಿಯ ದುವರ್ತನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಕಾರ್ಯಕರ್ತೆಯನ್ನ ಬಂಧಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಪ್ರತಿರೋಧ ಮಾಡಿದ ಮಹಿಳೆಯ ಬಟ್ಟೆ ಬಿಚ್ಚಿ ಹೀನ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.
ಘಟನೆಗೆ ಹಳೇ ವೈಷಮ್ಯ ಕಾರಣ ಎಂದು ವರದಿಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ನಮ್ಮ ವೋಟ್ ಡಿಲೀಟ್ ಮಾಡಿಸಿದ್ದಾರೆ ಅಂತ ಗಲಾಟೆ ಮಾಡಿದ್ದರು. ಹಾಗಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದೇ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ನ ನಗರ ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರಂತೆ. ಇದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು.
ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನ ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆಕೆ ಪ್ರತಿರೋಧ ತೋರಿ ಚೀರಾಡಿದ್ದಾರೆ. ಅಷ್ಟಕ್ಕೇ ಪೊಲೀಸರು ಆಕೆಯನ್ನ ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮಹಿಳೆಯನ್ನ ಥಳಿಸಿದ್ದು ಅಲ್ಲದೇ ಬಂಧನದ ವೇಳೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮತ್ತೊಂದು ದೂರು ದಾಖಲಿಸಿ ಜೈಲಿಗಟ್ಟಿದ್ದಾರೆ.
