Governor : ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಎಸ್ಸಿ ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದ 22 ವಿಧೇಯಕಗಳ ಪೈಕಿ 19 ವಿಧೇಯಕಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗುರುವಾರ ರಾತ್ರಿ ಅಂಕಿತ ಹಾಕಿದ್ದಾರೆ. ಆದರೆ ಕರ್ನಾಟಕ ಪರಿಶಿಷ್ಟ ಜಾತಿ(ಉಪ ವರ್ಗೀಕರಣ) ವಿಧೇಯಕ ಹಾಗೂ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಕಾನೂನುಗಳು(ತಿದ್ದುಪಡಿ) ವಿಧೇಯಕವನ್ನು ರಾಜ್ಯಪಾಲರು ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ರಾಜ್ಯಪಾಲರ ಪರಿಶೀಲನೆಯಲ್ಲೇ ದ್ವೇಷ ಭಾಷಣ ತಡೆ ಮಸೂದೆ ಇದೆ. ಇದಲ್ಲದೇ ಎಸ್ಸಿ ಒಳಮೀಸಲಾತಿ ಮಸೂದೆಯನ್ನು ರಾಜ್ಯಪಾಲರು ವಾಪಾಸ್ ಕಳುಹಿಸಿದ್ದಾರೆ. ಮಸೂದೆ ಕುರಿತು ಹೆಚ್ಚಿನ ಸ್ಪಷ್ಟೀಕರಣವನ್ನು ರಾಜ್ಯಪಾಲರು ಕೋರಿದ್ದಾರೆ. ಕಾನೂನು ತಜ್ಞರ ಜೊತೆಗೆ ಚರ್ಚೆಗೆ ರಾಜ್ಯಪಾಲರು ನಿರ್ಧರಿಸಿ ಈ ಮಸೂದೆಗಳಿಗೆ ಸಹಿ ಹಾಕದೆ ಸರ್ಕಾರಕ್ಕೆ ಕಳುಹಿಸಿದ್ದಾರೆ.
