HMT : ಕನ್ನಡಿಗರ ಹೆಮ್ಮೆ ಎನಿಸಿದ್ದ ಭಾರತದ ಪ್ರತಿಷ್ಠಿತ ವಾಚ್ ಕಂಪನಿಗಳಲ್ಲಿ ಒಂದಾಗಿರುವ, ಸರ್ಕಾರಿ ಸ್ವಾಮ್ಯದ ವಾಚ್ ತಯಾರಿಕಾ ಕಂಪನಿಯಾದ ಹಿಂದುಸ್ಥಾನ್ ಮಷಿನ್ ಟೂಲ್ಸ್ ಲಿ.(ಎಚ್‌ಎಂಟಿ) ಕೊನೆಗೂ ಬಂದ್ ಆಗುವ ಸಮಯ ಬಂದಿದೆ.
ಹೌದು, ನೋಂದಣಿ ದಾಖಲೆಗಳಿಂದ ತನ್ನ ವಾಚ್ ತಯಾರಿಕಾ ಘಟಕದ ಹೆಸರನ್ನು ರದ್ದುಪಡಿಸುವಂತೆ ಕೋರಿ ಕೇಂದ್ರ ಕಂಪನಿಗಳ ವ್ಯವಹಾರದ ಸಚಿವಾಲಯಕ್ಕೆ ಎಚ್‌ಎಂಟಿ ಪತ್ರ ಬರೆದಿದೆ. ಇದರೊಂದಿಗೆ ಕಂಪನಿ ಪುನರುಜ್ಜೀವನದ ಕನಸಿಗೆ ತೆರೆ ಬಿದ್ದಿದ್ದು, ಇತಿಹಾಸದ ಕೊಂಡಿಯೊಂದು ಕಳಚುವ ಸಮಯ ಕೊನೆಗೂ ಬಂದು ಬಿಟ್ಟಿದೆ.
ಎಚ್‌ಎಂಟಿಯ ಜನಪ್ರಿಯ ಬ್ರ್ಯಾಂಡ್‌ಗಳು 2016ರಲ್ಲಿ ಅಧಿಕೃತವಾಗಿ ಈ ಡಿವಿಷಿನ್ ಕ್ಲೋಸ್ ಆಗಿತ್ತು. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು(ಸಿಸಿಇಎ), ಎಚ್‌ಎಂಟಿಯ 3 ಅಂಗಸಂಸ್ಥೆಗಳನ್ನು ಮುಚ್ಚಲು ಅನುಮತಿ ನೀಡಿತ್ತು. ಆ ಬಳಿಕ ಅಗತ್ಯ ಔಪಚಾರಿಕತೆಗಳನ್ನೆಲ್ಲಾ ಪೂರೈಸಿದ್ದು, ಇದೀಗ ಅಂತಿಮವಾಗಿ ವಾಚ್ ತಯಾರಿಕೆಗೆ ಮಂಗಳ ಹಾಡಿದೆ. ಕೇಂದ್ರ ಸರ್ಕಾರದ ಹಿಂದಿನ ನಿರ್ಧಾರದ ಹೊರತಾಗಿಯೂ ಅದರ ಪುನರುಜ್ಜೀವನ ಆಸೆ ಇತ್ತು. ಆದರೆ ಇದೀಗ ಎಲ್ಲಾ ಆಸೆಗಳು ಕಮರಿ ಹೋಗಿವೆ.
