Toxic : ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಬಿಡುಗಡೆಗೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ. ಈ ನಡುವೆ ಚಿತ್ರತಂಡವು ಟೀಸರ್ ಅನ್ನು ರಿಲೀಸ್ ಮಾಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ನಟ ಯಶ್ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿದೆ. ಈ ಬೆನ್ನಲ್ಲೇ ಟಾಕ್ಸಿಕ್ ಸಿನಿಮಾಗೆ ಲೇಡಿ ನಿರ್ದೇಶಕಿ ಇರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಾಗಿದ್ರೆ ಯಾರು ಈ ಲೇಡಿ ನಿರ್ದೇಶಕಿ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ.
ಹೌದು, ಕೆಲವು ದಿನಗಳ ಹಿಂದೆ ರಿಲೀಸ್ ಆದ ಟಾಕ್ಸಿಕ್ ಟೀಸರ್ ಕಂಡು ಇಡೀ ಭಾರತೀಯ ಚಿತ್ರರಂಗವೇ ದಂಗಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಎಂಟ್ರಿಯನ್ನು ಕಂಡು ಬಾಲಿವುಡ್ ಕೂಡ ನಡುಗಿದೆ. ದೊಡ್ಡ ದೊಡ್ಡ ನಿರ್ದೇಶಕರು, ನಿರ್ಮಾಪಕರು ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ತುಂಬಾ ಗಮನ ಸೆಳೆದ ವಿಚಾರವೆಂದರೆ ಟಾಕ್ಸಿಕ್ ಅನ್ನು ನಿರ್ದೇಶಸುತ್ತಿರುವುದು ಒಬ್ಬ ಲೇಡಿ ನಿರ್ದೇಶಕಿ ಎಂಬುದು. ಅವರೇ ಗೀತು ಮೋಹನ್ ದಾಸ್.
ಗೀತು ಮೋಹನ್ ದಾಸ್ ಯಾರು..?
ಗೀತು ಮೋಹನ್ ದಾಸ್ ನಿಜವಾದ ಹೆಸರು ಗಾಯತ್ರಿ. ಅವರ ತಂದೆಯ ಹೆಸರು ಮೋಹನ್ ದಾಸ್. ಅವರು ಮಲಯಾಳಿ ಕುಟುಂಬದಿಂದ ಬಂದವರು. ಕೇರಳದ ಕೊಚ್ಚಿಯಲ್ಲಿ ಜನಿಸಿದ ಗೀತು ಮೊದಲು ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ನಟಿಯಾದರು. ‘ಒನ್ನು ಮುಟ್ಟಲ್ ಪೂಜ್ಯಂ ವಾರೆ’ ಗೀತು ಮೋಹನ್ ದಾಸ್ ಅವರ ಬಾಲನಟಿಯಾಗಿ ಮೊದಲ ಚಿತ್ರವಾಗಿತ್ತು. ಈ ಚಿತ್ರಕ್ಕೆ ಮೋಹನ್ ಲಾಲ್ ಧ್ವನಿ ನೀಡಿದ್ದಾರೆ.
ನಿರ್ದೇಶಕಿಯಾಗಿ ಪಯಣ
ಗೀತು ಮೋಹನದಾಸ್ ಅವರ ಪ್ರಯಾಣವು ಹಿಂದಿ ಚಿತ್ರ ‘ಲಯರ್ಸ್ ಡೈಸ್’ ನೊಂದಿಗೆ ಪ್ರಾರಂಭವಾಯಿತು. ಅದಕ್ಕೂ ಮೊದಲು ಅವರು ಕಿರುಚಿತ್ರವನ್ನು ನಿರ್ಮಿಸಿದರು. ‘ಲಯರ್ಸ್ ಡೈಸ್’ ಚಿತ್ರಕ್ಕಾಗಿ ಗೀತಾಂಜಲಿ ಥಾಪಾ ಮತ್ತು ರಾಜೀವ್ ರವಿ ಅತ್ಯುತ್ತಮ ನಟಿ ಮತ್ತು ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ಇದರ ನಂತರ, ಮಹಿಳಾ ನಿರ್ದೇಶಕಿ ಪ್ರೇಮಂ ನಾಯಕ ನಿವಿನ್ ಪೌಲಿ ಅವರೊಂದಿಗೆ ಮೂಥೋನ್ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಈಗ, ಗೀತು ಮೋಹನದಾಸ್ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಟಾಕ್ಸಿಕ್ ಸಿನಿಮಾ ಘೋಷಣೆಯಾದಾಗ, ಅನೇಕ ಜನರು ಅಚ್ಚರಿಗೊಂಡರು. ಇಲ್ಲಿಯವರೆಗೆ ಯಾವುದೇ ಕಮರ್ಷಿಯಲ್ ಸಿನಿಮಾ ಮಾಡದ ಗೀತು ಮೋಹನದಾಸರು, ಯಶ್ ನಂತಹ ಪ್ಯಾನ್ ಇಂಡಿಯಾ ನಾಯಕನನ್ನು ಹೇಗೆ ನಿಭಾಯಿಸುತ್ತಾರೆ ? ಎಂದು ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಇದೀಗ ಟೀಸರ್ ನೋಡಿ ಈ ಎಲ್ಲಾ ಅನುಮಾನಗಳು ಮುರಿದುಬಿದ್ದಿವೆ. ಕೇವಲ 24 ಗಂಟೆಗಳಲ್ಲಿ ʻಟಾಕ್ಸಿಕ್ʼ ಟೀಸರ್ ಈವರೆಗೂ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 200 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, 55+ ಲಕ್ಷ ಲೈಕ್ಸ್ ಪಡೆದುಕೊಂಡಿದೆ.
ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರು ಕೂಡ ಗೀತಾ ಅವರನ್ನು ಹಾಡಿ ಹೊಗಳಿದ್ದು ‘ಟಾಕ್ಸಿಕ್’ ಸಿನಿಮಾದ ಟೀಸರ್ ತುಂಬಾ ಬೋಲ್ಡ್ ಆಗಿದೆ. ಆದರೆ ಈ ಸಿನಿಮಾಗೆ ನಿರ್ದೇಶನ ಮಾಡಿರುವುದು ಗೀತು ಮೋಹನ್ದಾಸ್. ನಿರ್ದೇಶಕಿಯೊಬ್ಬರು ಈ ರೀತಿಯ ಮಾಸ್ ಸಿನಿಮಾ ಮಾಡುತ್ತಾರೆ ಎಂಬುದನ್ನು ರಾಮ್ ಗೋಪಾಲ್ ವರ್ಮಾ ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
