ಬಂಟ್ವಾಳ: ಶಬರಿಮಲೆ ಯಾತ್ರೆ ಮುಗಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಮನೆಗೆ ಮರಳುತ್ತಿದ್ದ ಯಾತ್ರಾರ್ಥಿಗಳ ತಂಡವೊಂದಕ್ಕೆ ಕೇರಳದಲ್ಲಿ ಲಾರಿ ಡಿಕ್ಕಿಯಾದ ಪರಿಣಾಮ, ಬಂಟ್ವಾಳ ಮೂಲದ 15 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಲಕ್ಷ್ಮೀಶ ಪೂಜಾರಿ (15) ಮೃತಪಟ್ಟ ವಿದ್ಯಾರ್ಥಿ.
ಲಕ್ಷ್ಮೀಶ ಪೂಜಾರಿ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಜನವರಿ 7 ರಂದು ತನ್ನ ತಂದೆ ಹಾಗೂ ಗ್ರಾಮದ ಇತರ ಐವರ ಜೊತೆ ಇನ್ನೋವಾ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದನು. ಜ.9 ರಂದು ಶುಕ್ರವಾರ ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ ಬಂಟ್ವಾಳಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಕೇರಳದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಎಂಬಲ್ಲಿ ಕಾರು ತಾಂತ್ರಿಕ ದೋಷದಿಂದ ಕೆಟ್ಟಿದೆ. ರಾತ್ರಿ 2 ಗಂಟೆಯ ಸುಮಾರಿಗೆ ಚಾಲಕ ಸೇರಿ ಏಳು ಮಂದಿ ಕಾರಿನ ಬಾನೆಟ್ ತೆರೆದು ರಿಪೇರಿ ಮಾಡುತ್ತಿದ್ದರು. ಅಶೋಕ್ ಪೂಜಾರಿ ಕಾರಿನ ಒಳಗಿದ್ದರು.
ಕಾರು ರಸ್ತೆ ಬದಿಯಲ್ಲಿದ್ದು, ಹಿಂಬದಿಯಿಂದ ಲಾರಿ ಅತಿ ವೇಗವಾಗಿ ಬಂದಿದ್ದು, ಜೋರಾಗಿ ಗುದ್ದಿದೆ. ಕಾರಿನ ಮುಂದಿದ್ದವರೆಲ್ಲರೂ ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಾಲಕ ಲಕ್ಷ್ಮೀಶ ಪೂಜಾರಿ ಲಾರಿಯ ಚಕ್ರದ ಅಡಿಗೆ ಬಿದ್ದು ಸ್ಥಳದಲ್ಲೇ ಮೃತ ಹೊಂದಿದ್ದಾನೆ.
ವರದರಾಜ್ ಎಂಬುವವರಿಗೆ ಈ ಅಪಘಾತದಲ್ಲಿ ತೀವ್ರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಉಳಿದಂತೆ ತಂಡದಲ್ಲಿದ್ದ ಸಂತೋಷ್ ಪೂಜಾರಿ, ಸಚಿನ್, ಗೋಪಾಲ ಪೂಜಾರಿ ಮತ್ತು ಕಿರಣ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಯಾಗಿದೆ.
