Text Book: ಕನ್ನಡದ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ ತಮ್ಮ ಇತರ ಕೆಲಸ ಕಾರ್ಯಗಳ ಮುಖಾಂತರ ನಾಡಿನ ಜನತೆಗೆ ಸ್ಪೂರ್ತಿ ಹಾಗೂ ಮಾದರಿಯಾಗಿದ್ದಾರೆ. ಬಾಲನಟನಾಗಿ ಚಿತ್ರರಂಗದಲ್ಲಿ ಮಿಂಚಿ, ಹೀರೋ ಆಗಿಯೂ ಜನಮನ ಗೆದ್ದ ಪುನೀತ್ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಮರಣೋತ್ತರವಾಗಿ ‘ಕರ್ನಾಟಕ ರತ್ನ’ವನ್ನು ನೀಡಿ ಗೌರವಿಸಿದೆ. ಈ ಬೆನ್ನಲ್ಲೇ ಪುನೀತ್ ರಾಜಕುಮಾರ್ ಅವರಿಗೆ ಮತ್ತೊಂದು ಗೌರವವನ್ನು ನೀಡಲು ಸರ್ಕಾರ ಮುಂದಾಗಿದ್ದು ಇನ್ನು ಮುಂದೆ ಶಾಲಾ ಪಟ್ಟೆಗಳಲ್ಲಿ ಅವರ ಜೀವನ ಪಾಠವನ್ನು ಬೋಧಿಸಲು ನಿರ್ಧರಿಸಿದೆ.
ಹೌದು, ಅಪ್ಪು ಜೀವನದ ಪಯಣವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ಅಗತ್ಯ ತಯಾರಿ ನಡೆಸಲಾಗಿದೆ. ಈ ವಿಚಾಟ ಪುನೀತ್ ರಾಜ್ಕುಮಾರ್ ಅವರ ಫ್ಯಾನ್ಸ್ ಗೆ ಖುಷಿ ತಂದಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಈ ವಿಷಯವನ್ನು ಪರಿಗಣಿಸಲು ‘ಪಠ್ಯ ಪುಸ್ತಕ ಸಂಘ’ ತೀರ್ಮಾನಿಸಿದೆ. ಅಂದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಶಾಲೆಗಳ ಪಠ್ಯಪುಸ್ತಕದಲ್ಲಿ ಪುನೀತ್ ರಾಜ್ಕುಮಾರ್ ಅವರ ಸಾಧನೆಗಳನ್ನು ಸೇರಿಸಲಾಗುವುದು. ಆ ಮೂಲಕ ಮುಂದಿನ ಪೀಳಿಗೆಗೆ ಪುನೀತ್ ರಾಜ್ಕುಮಾರ್ ಬಗ್ಗೆ ತಿಳಿಸಿಕೊಡಲಾಗುವುದು ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ದೃಢಪಡಿಸಿದೆ.
ಅಸಾಧಾರಣ ಬಾಲನಟನಿಂದ ಲೋಕೋಪಕಾರಿ ಮತ್ತು ಮೌಲ್ಯಗಳಿಗೆ ಹೆಸರುವಾಸಿಯಾದ ಸಾಮಾಜಿಕ ಪ್ರಜ್ಞೆಯ ವ್ಯಕ್ತಿಯಾಗುವ ಅವರ ಬದುಕಿನ ಪಯಣ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವ ರೀತಿ ಇದ್ದು ಅದನ್ನು ಮಕ್ಕಳಿಗೆ ಸೇರಿಸಿದರೆ ಉತ್ತಮ ಎಂಬ ನಿರ್ಧಾರಕ್ಕೆ ಪಠ್ಯಪುಸ್ತಕ ಸೊಸೈಟಿ ಬಂದಿದೆ.
