Ajit Doval: ಇಂದು ಮೊಬೈಲ್, ಇಂಟರ್ನೆಟ್ ಯಾವುದು ಇಲ್ಲದೆ ಜೀವಿಸಲು ಬಲು ಕಷ್ಟ. ಏನಾದರೂ ಒಂದು ಮಾಹಿತಿಯನ್ನು ಪಡೆಯಬೇಕೆಂದರೆ ಇವೆರಡನ್ನು ನಾವು ಇಂದು ಅರಸಲೇ ಬೇಕು. ಆದರೆ ಭಾರತದ ಪ್ರಭಾವಿ ವ್ಯಕ್ತಿಯಾದ ಸೂಪರ್ ಸ್ಪೈ ಎನಿಸಿಕೊಂಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (National Security Advisor) ಅಜಿತ್ ದೋವೆಲ್ (Ajit Doval) ಮೊಬೈಲ್ ಮತ್ತು ಇಂಟರ್ನೆಟ್ ಅನ್ನು ಬಳಸುವುದೇ ಇಲ್ಲವಂತೆ. ಹಾಗಿದ್ರೆ ಅವರು ಸಂವಹನ ನಡೆಸುವುದು ಹೇಗೆ? ಬೇರೆ ಬೇರೆ ಮಾಹಿತಿಗಳನ್ನು ಕಲೆ ಹಾಕುವುದು ಹೇಗೆ? ಎಂಬ ಪ್ರಶ್ನೆಗಳು ನಮಗೆ ಕಾಡುತ್ತವೆ. ಇದೀಗ ಅವರೇ ತಮ್ಮ ಸೀಕ್ರೆಟ್ ಅನ್ನೋ ರೆವಿನ್ ಮಾಡಿದ್ದಾರೆ.
ಹೌದು, ದಶಕಗಳ ಕಾಲ ಗುಪ್ತಚರ ಜಗತ್ತಿನಲ್ಲಿ ಕೆಲಸ ಮಾಡಿ ಅಪಾರ ಅನುಭವ ಹೊಂದಿರುವ ಅಜಿತ್ ದೋವೆಲ್ ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ ಇಡುವ ಪ್ರತಿಯೊಂದು ಹೆಜ್ಜೆಯೂ ಬಹಳ ಆಲೋಚನೆ ಮತ್ತು ಎಚ್ಚರಿಕೆಯಿಂದ ಕೂಡಿರುತ್ತದೆ. ಇಂತಹ ಮಹಾನ್ ಸಾಧಕ ತಾವು ಯಾವುದೇ ರೀತಿಯ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬಳಸುವುದಿಲ್ಲ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಈ ಕುರಿತಾಗಿ ಅವರೇ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಇತ್ತೀಚೆಗೆ ವಿಕ್ಷಿತ್ ಭಾರತ್ ಯುವ ನಾಯಕರ ಸಂವಾದ 2026ರ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ್ದು, ಈ ವೇಳೆ ಸಭಾಂಗಣದಲ್ಲಿದ ವಿದ್ಯಾರ್ಥಿಗಳು ನೀವು ಇಂಟರ್ನೆಟ್, ಮೊಬೈಲ್ ಬಳಸುವುದಿಲ್ಲ ಎಂಬ ವಿಚಾರದ ಬಗ್ಗೆ ಅದು ನಿಜವೇ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಹೌದು ನಾನು ಇಂಟರ್ನೆಟ್ ಬಳಸಲ್ಲ ಎಂಬುದು ನಿಜ. ನನ್ನ ಕುಟುಂಬದ ವಿಷಯ ಮತ್ತು ವಿದೇಶಿ ನಾಯಕರೊಂದಿಗೆ ಮಾತನಾಡುವುದನ್ನು ಹೊರತುಪಡಿಸಿ ಮೊಬೈಲ್ ಬಳಸಲ್ಲ. ಅದು ನನ್ನ ಕೆಲಸಕ್ಕೆ ಅವಶ್ಯಕ. ಸಂವಹನಕ್ಕೆ ಇನ್ನೂ ಹಲವು ಮಾರ್ಗಗಳಿವೆ. ಜನರಿಗೆ ತಿಳಿದಿಲ್ಲದ ಕೆಲವು ಹೆಚ್ಚುವರಿ ವಿಧಾನಗಳನ್ನು ವ್ಯವಸ್ಥೆಯಿದೆ ಎಂದು ತಿಳಿಸಿದ್ದಾರೆ.
ಅಜಿತ್ ದೋವಲ್ ಅವರು ಮೊಬೈಲ್ ಫೋನ್ ಬಳಸದಿರಲು ಬಲವಾದ ಕಾರಣವು, ಯಾವುದೇ ರೀತಿಯ ಶೋಕಿ ಅಥವಾ ಸಾಮಾನ್ಯವಾದ ನಿರ್ಧಾರವಲ್ಲ. ಬದಲಾಗಿ ಅತ್ಯಂತ ಗಂಭೀರವಾದ ಮತ್ತು ಯೋಜಿತ ಭದ್ರತಾ ನೀತಿಯಾಗಿದೆ. ಮುಂದುವರೆದು, ರಾಷ್ಟ್ರೀಯ ಭದ್ರತಾ ಸಲಹೆಗಾರರ ಹುದ್ದೆಯಲ್ಲಿರುವ ವ್ಯಕ್ತಿಯ ಬಳಿ, ದೇಶದ ಭದ್ರತೆಗೆ ಸಂಬಂಧಿಸಿದ ಭಯೋತ್ಪಾದನೆ, ಗುಪ್ತಚರ ಕಾರ್ಯಾಚರಣೆಗಳು, ತಾಂತ್ರಿಕ ನಿರ್ಧಾರಗಳು ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಿಚಾರಗಳ ಮಾಹಿತಿಗಳು ಇರುತ್ತವೆ. ಏತನ್ಮಧ್ಯೆ, ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಹ್ಯಾಕ್ ಆಗುವ ಸಾಧ್ಯತೆ, ಲೊಕೇಶನ್ ಟ್ರ್ಯಾಕಿಂಗ್ ಮತ್ತು ಸಂಭಾಷಣೆಗಳ ಇಂಟರ್‌ಸೆಪ್ಷನ್ ದೊಡ್ಡ ಅಪಾಯವಾಗಿದೆ. ಹಾಗಾಗಿಯೇ, ಇಂತಹ ಪರಿಸ್ಥಿತಿಯಲ್ಲಿ ಡಿಜಿಟಲ್ ಸಾಧನಗಳಿಂದ ದೂರವಿರುವುದೇ ಸುರಕ್ಷಿತ ಎಂಬುದು ದೋವಲ್ ಅವರ ನಿಲುವಾಗಿದೆ.
ಇನ್ನೂ ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್, 1945ರಲ್ಲಿ ಉತ್ತರಾಖಂಡದಲ್ಲಿ ಜನಿಸಿದರು. ಕೇರಳ ಕೇಡರ್‌ನ ನಿವೃತ್ತ ಐಪಿಎಸ್ ಅಧಿಕಾರಿ. ಅವರು 1968 ರಲ್ಲಿ ಸೇವೆಗೆ ಸೇರಿದರು ಮತ್ತು ಶೌರ್ಯಕ್ಕಾಗಿ ಕೀರ್ತಿ ಚಕ್ರ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಪೊಲೀಸ್ ಅಧಿಕಾರಿ. 2016 ರ ಸರ್ಜಿಕಲ್ ಸ್ಟ್ರೈಕ್, 2019 ರ ಬಾಲಕೋಟ್ ಏರ್‌ಸ್ಟ್ರೈಕ್ ಮತ್ತು ಡೋಕ್ಲಾಮ್ ಗಡಿ ವಿವಾದದಲ್ಲಿ ಭಾರತದ ರಾಜತಾಂತ್ರಿಕ ಮತ್ತು ಭದ್ರತಾ ಕ್ರಮಗಳ ಹಿಂದಿನ ಪ್ರಮುಖ ವ್ಯಕ್ತಿ ಇವರಾಗಿದ್ದಾರೆ.
1999 ರಲ್ಲಿ ಕಂದಹಾರ್‌ನಲ್ಲಿ ನಡೆದ IC-814 ವಿಮಾನ ಅಪಹರಣ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಸಂಧಾನಕಾರರಲ್ಲಿ ಒಬ್ಬರಾಗಿದ್ದರು. 1971 ಮತ್ತು 1999 ರ ನಡುವೆ ಹಲವಾರು ಅಪಹರಣ ಪ್ರಕರಣಗಳನ್ನು ಅವರು ನಿರ್ವಹಿಸಿದ್ದಾರೆ. ಪಾಕಿಸ್ತಾನದಲ್ಲಿ ವರ್ಷಗಳ ರಹಸ್ಯ ಕೆಲಸ ಮಾಡಿದ ಅಪಾರ ಅನುಭವ ಕೂಡ ಅವರಿಗಿದೆ.
