Kogilu Layout : ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಸುಮಾರು 21ಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸಿರುವ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಕೇರಳ ಸರ್ಕಾರವು ಕೂಡ ಈ ವಿಚಾರವಾಗಿ ತೂರಿಸಿ ಈ ವಿವಾದವನ್ನು ಇನ್ನಷ್ಟು ದೊಡ್ಡದು ಮಾಡಿತ್ತು. ಇಲ್ಲಿ ಕಳೆದ 25 ವರ್ಷಗಳಿಂದ ವಾಸವಿದ್ದೇವೆ, ನಮಗೆ ಬೇರೆ ಕಡೆ ಮನೆಗೆ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಸ್ಥಳೀಯರು ಹೇಳಿದ್ದರು. ಅಲ್ಲದೆ ಈ ಪ್ರಕರಣ ಕೋರ್ಟು ಮೆಟ್ಟಿಲನ್ನು ಕೂಡ ಏರಿತ್ತು.
ಆದರೆ ಈ ಆರೋಪಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಯಾಟಲೈಟ್ ಫೋಟೋ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿತ್ತು. ಈ ಸ್ಯಾಟಲೈಟ್ ಫೋಟೋಗಳು 2016ರ ಮೊದಲು ಆ ಪ್ರದೇಶದಲ್ಲಿ ಯಾವುದೇ ಮನೆಗಳೂ ಇರಲಿಲ್ಲವೆಂಬುದನ್ನು ಸ್ಪಷ್ಟಪಡಿಸಿವೆ. ಈ ವಿಚಾರವನ್ನು ಬಿಜೆಪಿ ಕೂಡ ದೊಡ್ಡ ಮಟ್ಟದಲ್ಲಿ ಚರ್ಚಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅರ್ಹರಿಗೆ ಮಾತ್ರ ಮನೆಯನ್ನು ಕೊಡುವುದಾಗಿ ಹೇಳಿಕೆ ನೀಡಿತ್ತು. ಆದರೆ ಇದೀಗ ಕೋಗಿಲು ಲೇಔಟ್ ನಲ್ಲಿ ನಮಗೆ ಮನೆಯನ್ನು ನೀಡಬೇಕು ಎಂದು ಸರ್ಕಾರಕ್ಕೆ ಪಟ್ಟು ಹಿಡಿದವರು ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದಾರೆ. ಕಾರಣ ಇಲ್ಲಿ ವಾಸವಿದ್ದವರಲ್ಲಿ 25 ಮಂದಿ ಮಾತ್ರ ಅರ್ಹರು ಎಂಬುದು ಬೆಳಕಿಗೆ ಬಂದಿದೆ.
ಯಸ್, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ, ಲೇಔಟ್‌ನಲ್ಲಿದ್ದ ಅಕ್ರಮ ನಿವಾಸಿಗಳು ಜಾಗ ಖಾಲಿ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಪೊಲೀಸರು ಒತ್ತುವರಿದಾರರ ಹಿನ್ನೆಲೆ ಮತ್ತು ದಾಖಲೆಗಳನ್ನು ಜಾಲಾಡಲು ಆರಂಭಿಸಿದ್ದಾರೆ. ತನಿಖೆ ಚುರುಕಾಗುತ್ತಿದ್ದಂತೆಯೇ, ಲೇಔಟ್‌ನಲ್ಲಿದ್ದ ಉತ್ತರ ಪ್ರದೇಶ, ಆಂಧ್ರಪ್ರದೇಶ ಮೂಲದ ಅನೇಕ ಕುಟುಂಬಗಳು ಮನೆಗಳನ್ನು ಖಾಲಿ ಮಾಡಿ ಪರಾರಿಯಾಗುತ್ತಿವೆ. ‘ನಮ್ಮ ಬಳಿ ಎಲ್ಲಾ ಸರಿಯಾದ ದಾಖಲೆಗಳಿವೆ’ ಎಂದು ವಾದಿಸುತ್ತಿದ್ದವರೂ ಕೂಡ ಪೊಲೀಸ್ ವಿಚಾರಣೆಗೆ ಹೆದರಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನೂ ಒಟ್ಟು 167 ಒತ್ತುವರಿದಾರರ ಪೈಕಿ ಕೇವಲ 25 ಜನರು ಮಾತ್ರ ಮನೆ ಪಡೆಯಲು ಅರ್ಹರು ಎಂಬ ಪ್ರಾಥಮಿಕ ವರದಿ ಲಭ್ಯವಾಗಿದೆ. ಆದರೆ, ಈ 25 ಜನರ ಹಿನ್ನೆಲೆಯನ್ನೂ ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಅವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಮೂಲ ಸ್ಥಳದ ಬಗ್ಗೆ ತನಿಖೆ ನಡೆಯುತ್ತಿದೆ.
