Home » Dakshina kannada: ದಕ್ಷಿಣ ಕನ್ನಡ: ಸಾಲ ಮನ್ನಾ: ಎಲೆ ಚುಕ್ಕಿ ಸಮೀಕ್ಷಾ ಅರ್ಜಿಯನ್ನು ಜ.31 ರೊಳಗೆ ನೀಡಲು ಮನವಿ

Dakshina kannada: ದಕ್ಷಿಣ ಕನ್ನಡ: ಸಾಲ ಮನ್ನಾ: ಎಲೆ ಚುಕ್ಕಿ ಸಮೀಕ್ಷಾ ಅರ್ಜಿಯನ್ನು ಜ.31 ರೊಳಗೆ ನೀಡಲು ಮನವಿ

0 comments

Dakshina kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದ್ದು, ಇದರಿಂದ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಕಷ್ಟಕ್ಕೊಳಗಾಗಿರುವ ಅಡಿಕೆ ಬೆಳೆಗಾರರ ಬೆಳೆಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಅಡಿಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಘಟಕದ ಸಂಚಾಲಕ ಎಂ.ಡಿ. ವಿಜಯಕುಮಾರ್ ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಹಕ್ಕೊತ್ತಾಯ ಮಂಡಿಸಿದರು.

ಅಡಿಕೆ ಬೆಳೆಗಳಿಗೆ ಬಂದಿರುವ ರೋಗದಿಂದ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ನಷ್ಟ ಉಂಟಾಗಿದ್ದು, ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ದೀರ್ಘಾವಧಿ ಸಾಲದ ಮೇಲಿನ ಶೇ.೩ ಬಡ್ಡಿಯನ್ನು ಮನ್ನಾ ಮಾಡಬೇಕು, ತೀವ್ರ ಆರ್ಥಿಕ ಹೊಡೆತದ ಹಿನ್ನೆಲೆಯಲ್ಲಿ ದೀರ್ಘಾವಧಿ ಬೆಳೆ ಸಾಲದ ಮರುಪಾವತಿ ಅವಧಿಯನ್ನು ಎರಡು ವರ್ಷ ವಿಸ್ತರಿಸಬೇಕು” ಎಂದು ಒತ್ತಾಯಿಸಿದರು. ರೋಗ ನಿಯಂತ್ರಣಕ್ಕೆ ಅಗತ್ಯವಿರುವ ಔಷಧಿಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕು ಹಾಗೂ ತಜ್ಞರ ಮೂಲಕ ಸಮೀಕ್ಷೆ ನಡೆಸಿ ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ರೈತರ ಹೋರಾಟ ನಡೆಸಲಾಗುವುದು”ಎಂದು ಅವರು ಎಚ್ಚರಿಸಿದರು.

ಎಲೆ ಚುಕ್ಕಿ ರೋಗ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಇದೆ ಎಂಬ ಬಗ್ಗೆ ರೈತರೇ ಸ್ವತಃ ಸಮೀಕ್ಷೆ ನಡೆಸಿ ಸರಕಾರಕ್ಕೆ ಕೊಡುವ ತೀರ್ಮಾನವನ್ನು ಕೈಗೊಂಡಿದ್ದೇವೆ. ಅದಕ್ಕಾಗಿ ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಸಹಕಾರದೊಂದಿಗೆ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಸಮೀಕ್ಷೆ ನಡೆಸಲಾಗುವುದು. ರೈತರು ತಮ್ಮ ಸಹಕಾರಿ ಸಂಘದಿಂದ ನಿಗದಿತ ಶುಲ್ಕ ಪಾವತಿಸಿ ಸಮೀಕ್ಷಾ ಅರ್ಜಿ ಪಡೆದು ಇದೇ ತಿಂಗಳು ಜನವರಿ 31 ರೊಳಗೆ ಅರ್ಜಿಯನ್ನು ತುಂಬಿ ನೀಡಬೇಕು ಎಂದು ಎಂ.ವಿಜಯ ಕುಮಾರ್ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಅಡಿಕೆ ಕೃಷಿಕರಾದ ಜಾಕೆ ಮಾಧವ ಗೌಡ, ಜಯರಾಮ ಹಾಡಿಕಲ್ಲು, ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.

You may also like