ಬೆಂಗಳೂರು: ರೈಲಿನಲ್ಲಿ ಪ್ರಯಾಣಿಕರನ್ನು ಪರಿಚಯಿಸಿಕೊಂಡು ಟೀ ಹಾಗೂ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕೊಟ್ಟು ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಮೊಹಮ್ಮದ್ ಸಫಾರ್ ಹಾಗೂ ಸತರ್ಮ್ ಬಂಧಿತರು. ಆರೋಪಿಗಳು ರೈಲಿನಲ್ಲಿ ಬಿಹಾರದ ಕೃಷ್ಣಕುಮಾರ್ ಎಂಬುವವರಿಗೆ ಮತ್ತು ಬರುವ ಔಷಧ ಕೊಟ್ಟು ಪ್ರಜ್ಞೆ ತಪ್ಪಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣ ಕದ್ದು ಪರಾರಿ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣಕುಮಾರ್, ನಗರದಿಂದ ಪಟನಾದ ದಾನಾಪುರಕ್ಕೆ ಹೋಗಲು ರೈಲು ಹತ್ತಿದ್ದರು. ಆಗ ಅವರ ಪಕ್ಕದಲ್ಲೇ ಹೋಗಿ ಕುಳಿತಿದ್ದ ಆರೋಪಿಗಳು, ತಾವು ಬಿಹಾರದವರು ಎಂದು ಪರಿಚಯಿಸಿಕೊಂಡಿದ್ದರು. ನಂತರ ಟೀ ಕುಡಿಯೋಣ ಎಂದು ಕೃಷ್ಣಕುಮಾರ್‌ಗೆ ಕೇಳಿದ್ದರು. ಬಳಿಕ ಆರೋಪಿಗಳ ಪೈಕಿ ಒಬ್ಬಾತ ರೈಲಿನಿಂದ ಕೆಳಗಿಳಿದು ಹೋಗಿ, ಟೀಗೆ ಮತ್ತು ಬರುವ ಔಷಧ ಬೆರೆಸಿಕೊಂಡು ಬಂದು ಕೃಷ್ಣಕುಮಾರ್‌ಗೆ ಕುಡಿಸಿದ್ದ. ಕೃಷ್ಣಕುಮಾರ್ ಪ್ರಜ್ಞೆ ತಪ್ಪುತ್ತಿದ್ದಂತೆ ಆರೋಪಿಗಳು, ಅವರ ಬ್ಯಾಗ್‌ನಲ್ಲಿದ್ದ 4 ಸಾವಿರ ರೂ.ನಗದು, ಚಿನ್ನದ ಸರ ಹಾಗೂ ಮೊಬೈಲ್ ದೋಚಿ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
