Water Bell : ಶಾಲೆಗೆ ಬರುವ ಮಕ್ಕಳ ಆರೋಗ್ಯವು ಕೂಡ ಉತ್ತಮವಾಗಿ ಇರಬೇಕೆಂದು ಸರ್ಕಾರವು ನಾನಾ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಪ್ರತಿಯೊಂದು ಶಾಲೆಗಳಲ್ಲಿಯೂ ಮಕ್ಕಳಿಗೆ ನೀರು ಕುಡಿಯಲು ವಾಟರ್ ಬಿಲ್ ಬಾರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ನೆನಪಿಸಲು ವಾಟರ್ ಬೆಲ್(ನೀರಿನ ಗಂಟೆ)ಬಾರಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗೆ, ನೀರು ಕುಡಿಯುವಂತೆ ಜ್ಞಾಪಿಸಲು “ವಾಟರ್ ಬೆಲ್” (ನೀರಿನ ಗಂಟೆ) ಬಾರಿಸುವುದು ಸೂಕ್ತವಾಗಿರುತ್ತದೆ ಎಂದು ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯವಶ್ಯಕವಾಗಿರುತ್ತದೆ. ಏಕೆಂದರೆ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ಸುರಕ್ಷಿತ ನೀರು ಕುಡಿಯುವುದರಿಂದ ನೀರಿನಿಂದ ಹರಡಬಹುದಾದ ಕಾಯಿಲೆಗಳನ್ನು ತಡೆಗಟ್ಟುತ್ತದೆ, ಮಕ್ಕಳು ಆಟವಾಡಲು ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ನೀರು ಅವಶ್ಯಕವಾಗಿರುತ್ತದೆ. ಆದ್ದರಿಂದ ರಾಜ್ಯದಲ್ಲಿರುವ ಎಲ್.ಕೆ.ಜಿ. ಯು.ಕೆ.ಜಿ ಒಳಗೊಂಡಂತೆ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗೆ, ನೀರು ಕುಡಿಯುವಂತೆ ಜ್ಞಾಪಿಸಲು ವಾಟರ್ ಬೆಲ್(ನೀರಿನ ಗಂಟೆ) ಬಾರಿಸುವ ನಿಯಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಆದೇಶಿಸಿದೆ.
