Bidar: ಇತ್ತೀಚಿಗೆ ದೇಶದಾದ್ಯಂತ ಗಾಳಿಪಟದ ದಾರದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿಯೇ ಗಾಳಿಪಟದ ದಾರವೊಂದು ಬೈಕ್ ಸವಾರನ ಪ್ರಾಣ ತೆಗೆದಂತಹ ಮನ ಮಿಡಿಯುವ ಘಟನೆಯೊಂದು ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಬೀದರ್ ಜಿಲ್ಲೆಯ ತಲಮಡಗಿ ಸೇತುವೆ ಸಮೀಪ ನಡೆದ ದಾರುಣ ಘಟನೆಯಲ್ಲಿ, ದ್ವಿಚಕ್ರ ವಾಹನ ಸವಾರ ಗಾಳಿಪಟದ ದಾರ ತಗುಲಿ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಗ್ರಾಮದ ಸೇತುವೆ ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ ಹೊಸಮನಿ (48) ಗಾಳಿಪಟ್ಟ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕೊಯ್ದಿದೆ. ಕುತ್ತಿಗೆ ಸೀಳಿ ರಕ್ತ ಹರಿಯುತ್ತಿದ್ದು, ಕೂಡಲೇ ಗುಂಡಪ್ಪ ಮಗಳಿಗೆ ಕರೆ ಮಾಡಿ ಸಹಾಯ ಪಡೆಯಲು ಯತ್ನಿಸಿದ್ದಾರೆ. ಆದರೆ ಗಾಳಿಪಟ ದಾರು ಕುತ್ತಿಗೆ ಆಳಕ್ಕೆ ಕೊಯ್ದಿದ್ದರಿಂದ ಅತೀವ ರಕ್ತಸ್ರಾವಕ್ಕೆ ಒಳಗಾಗಿದ್ದಾರೆ.
ಮೃತದೇಹವನ್ನು ಮನ್ನಾಏಖೆಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರಕ ಮಾಂಜಾ ದಾರ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
