Harsha Richariya : 2025ರಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಹಲವಾರು ವಿಚಾರಗಳು ವೈರಲ್ ಆಗಿದ್ದವು. ಅದರಲ್ಲಿ ಹರ್ಷರಿಚಾರಿಯಾ ಎಂಬ ಮಾಡೆಲ್ ಕೂಡ ಒಬ್ಬಳು. ಆಕೆ ತನ್ನ ಮಾಡೆಲ್ ವೃತ್ತಿಯನ್ನು ಬಿಟ್ಟು ಸಾಧ್ವಿಯಾಗಿ ದೀಕ್ಷೆ ಸ್ವೀಕರಿಸಿ, ಧರ್ಮದ ಪಥದಲ್ಲಿ ನಡೆಯಲು ಮುಂದಾಗಿದ್ದಳು. ಆದರೀಗ ಆಧ್ಯಾತ್ಮದ ಹಾದಿಯಲ್ಲಿ ಎದುರಾದ ವಿರೋಧ, ಆರ್ಥಿಕ ಸಂಕಷ್ಟ ಮತ್ತು ಸಾಲದಿಂದಾಗಿ, ಅವರು ತಮ್ಮ ಹಳೆಯ ಮಾಡೆಲಿಂಗ್ ಮತ್ತು ನಟನಾ ವೃತ್ತಿಗೆ ಮರಳುವುದಾಗಿ ಘೋಷಿಸಿದ್ದಾರೆ.
ಯಸ್, ಕಳೆದ ವರ್ಷದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದಲ್ಲಿ ಗಮನ ಸೆಳೆದಿದ್ದ ವೈರಲ್ ಸಾಧ್ವಿ ಹರ್ಷ ರಿಚಾರಿಯಾ ಈಗ ಧರ್ಮದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಹರ್ಷ ರಿಚಾರಿಯಾ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಧರ್ಮದ ಮಾರ್ಗ ಮತ್ತು ಆಧ್ಯಾತ್ಮಿಕ ಪ್ರವಚನವನ್ನು ತೊರೆದು ತಮ್ಮ ಹಳೆಯ ವೃತ್ತಿಗೆ ಮರಳುವ ಬಗ್ಗೆ ಮಾತನಾಡುತ್ತಿದ್ದಾರೆ.
ಮಹಾಕುಂಭ ಮೇಳ ನಡೆದು ಹೆಚ್ಚು ಕಡಿಮೆ ಒಂದು ವರ್ಷದ ನಂತರ ಹರ್ಷ ರಿಚಾರಿಯಾ ತಮ್ಮ ಮನದ ನೋವು ಹೊರ ಹಾಕಿದ್ದಾರೆ. ತಮ್ಮ ಮೇಲೆ ನಡೆಯುತ್ತಿರುವ ಸೈಬರ್ ದಾಳಿಯಿಂದ ಹೈರಾಣಾಗಿ ಕಣ್ಣೀರಾಗಿದ್ದಾರೆ. ನಿಮ್ಮ ಧರ್ಮವನ್ನ ನಿಮ್ಮ ಬಳಿಯೇ ಇಟ್ಕೊಳ್ಳಿ ಎಂದು ಹೇಳಿ ಧರ್ಮದ ಹಾದಿಗೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಹರ್ಷ ರಿಚಾರಿಯಾ ಮಹಾಕುಂಭ ಮೇಳ 2025ರಿಂದ ಶುರುವಾದ ಕಥೆಯೊಂದು ಈಗ ಅಂತ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಈ ಒಂದು ವರ್ಷದಲ್ಲಿ ನನಗೆ ಸಿಕ್ಕಿದ್ದು ಕೇವಲ ವಿರೋಧ ಮಾತ್ರ ಎಂದು ಹೇಳಿರುವ ಹರ್ಷ ರಿಚಾರಿಯಾ ನಾನು ತಪ್ಪು ಮಾಡದಿದ್ದರೂ, ಧರ್ಮದ ಹಾದಿಯಲ್ಲಿ ಮುನ್ನಡೆಯುವ ಪ್ರಯತ್ನವನ್ನು ಮಾಡಿದರು ಕೂಡ ನನ್ನನ್ನು ತಡೆಯಲಾಯ್ತು ಎಂದು ಹೇಳಿದ್ದಾರೆ.
ಅಲ್ಲದೆ “ಕಳೆದ ಒಂದು ವರ್ಷದಿಂದ ತಾನು ನಿರಂತರ ವಿರೋಧವನ್ನು ಎದುರಿಸುತ್ತಿದ್ದೇನೆ. ನನ್ನ ವ್ಯಕ್ತಿತ್ವವನ್ನು ಪ್ರಶ್ನಿಸಿದ್ದಾರೆ. ಧರ್ಮದ ಮಾರ್ಗವನ್ನು ಅನುಸರಿಸಿ ನಾನು ಏನೇ ಮಾಡಲು ಪ್ರಯತ್ನಿಸಿದರೂ ಅದನ್ನು ವಿರೋಧಿಸಿದ್ದಾರೆ. ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿದ್ದೇನೆ, ನಾನು ಮಾಡಬೇಕಾದ್ದನ್ನು ಮಾಡಿದ್ದೇನೆ. ಆದ್ದರಿಂದ, ನೀವು ನಿಮ್ಮ ಧರ್ಮವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಅಗ್ನಿ ಪರೀಕ್ಷೆಗೆ ಒಳಗಾಗಲು ನಾನು ತಾಯಿ ಸೀತಾ ಅಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ವೃತ್ತಿ ಜೀವನಕ್ಕೆ ಮರಳುವ ಮೊದಲು ಜನವರಿ 18 ರಂದು ಕೊನೆಯ ಬಾರಿ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಸ್ನಾನ ಮಾಡುತ್ತೇನೆ. ಹರ್ ಹರ್ ಮಹಾದೇವ್ ಜಪಿಸುತ್ತೇನೆ’ ಎಂದಿದ್ದಾರೆ.
