ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದಲ್ಲಿ 80 ವರ್ಷದ ವೃದ್ಧೆ ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಅವರನ್ನು ಅಣ್ಣನ ಮಕ್ಕಳೇ ಆಸ್ತಿಗಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
11 ಎಕರೆ ಆಸ್ತಿಗಾಗಿ ಕೃತ್ಯ ಎಸೆಯಲಾಗಿದೆ ಎನ್ನಲಾಗಿದೆ. ದಾನಜಕ್ಕಿ ಅವರು ತಮ್ಮ ಜೀವಮಾನವಿಡೀ ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದರು. ತರಕಾರಿ ಮಾರಿ ಕೂಡಿಟ್ಟ ಹಣದಿಂದ ಅನೇಕ ದಾನ ಕಾರ್ಯ ಮಾಡುತ್ತಿದ್ದರು. 2022ರಲ್ಲಿ ಪ್ರಭುಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಗೆ 20 ಕೆಜಿ ತೂಕದ , 16 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಬಾಗಿಲನ್ನು ದಾನ ಮಾಡಿದ್ದರು. 3 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಠಡಿಯೊಂದನ್ನು ನಿರ್ಮಿಸಿಕೊಟ್ಟಿದ್ದರು.
ದಾನ ಧರ್ಮಗಳ ಗುಣದಿಂದಾಗಿಯೇ ಇವರನ್ನು ದಾನಜ್ಜಿ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು.
ಆಸ್ತಿ ವಿವಾದವೇ ವೃದ್ಧೆಯ ಕೊಲೆಯಾಗಿದೆ. ದಾನಜ್ಜಿ ಮತ್ತು ಅವರ ಅಣ್ಣನ ಮಕ್ಕಳ ನಡುವೆ 11 ಎಕರೆ ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯಗಳಿದ್ದವು. ಜ.13 ರಂದು ಸರ್ವೆ ಅಧಿಕಾರಿಗಳು ದಾನಜ್ಜಿ ಅವರ ಹೊಲದ ಭೂಮಿಯ ಸರ್ವೆಗೆ ಬಂದ ಸಂದರ್ಭದಲ್ಲಿ ಅಜ್ಜಿ ಘಟಪ್ರಭಾ ಕಾಲುವೆ ಪಕ್ಕ ನಡೆದುಕೊಂಡು ಹೋಗುವಾಗ ಕಾಲುವೆಗೆ ಅವರನ್ನು ತಳ್ಳಿದ್ದು, ಕೊಲೆಗೆ ಪ್ರಯತ್ನ ಮಾಡಲಾಗಿತ್ತು. ನಂತರ ಆಕೆಯನ್ನು ಉಳಿಸುವ ಪ್ರಯತ್ನದ ನಾಟಕ ಕೂಡಾ ಮಾಡಲಾಗಿತ್ತು.
ಆರೋಪಿಗಳು ನಂತರ ಗೋಕಾಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿ, ಕೊಲೆ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಕೊಲೆ ಮಾಡಿದ ನಂತರ ದಾನಜ್ಜಿ ಅಣ್ಣನ ಮಕ್ಕಳು ಆತುರವಾಗಿ ಅಂತ್ಯಸಂಸ್ಕಾರ ಮಾಡಲು ಪ್ರಯತ್ನ ಪಟ್ಟಿದ್ದರು. ಆದರೆ ಸ್ಥಳೀಯರಿಗೆ ಅನುಮಾನ ಹುಟ್ಟಿಕೊಂಡಿದ್ದು, ಈ ಗಡಿಬಿಡಿಯ ವರ್ತನೆಯಿಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಈ ಕೊಲೆ ಕೃತ್ಯ ಬಯಲಿಗೆ ಬಂದಿದೆ. ಸದ್ಯಕ್ಕೆ ಐದು ಮಂದಿ ಆರೋಪಿಗಳನ್ನು ಬಂಧನ ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದು ಬಾಗಲಕೋಟೆ ಎಸ್‌ಪಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.
