ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಶೀಟು ಕಾಯರ್ತೋಡಿ ರಸ್ತೆಯಲ್ಲಿ ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಚಿರತೆಯೊಂದು ಎದುರಾಗಿದ್ದು, ಬಾಲಕ ಭಯಗೊಂಡು ತನ್ನ ಸೈಕಲನ್ನು ಹಿಂದಕ್ಕೆ ತಿರುಗಿಸಿ ವೇಗವಾಗಿ ಓಡಿಸಿ ತನ್ನ ಮನೆಗೆ ಸೇರಿದ ಘಟನೆ ಜ.16 ರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಕಲ್ಮಂಜ ಗ್ರಾಮದ ವಿದ್ಯಾರ್ಥಿ, ಮುಂಡಾಜೆ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ಜೀವಾಪಾಯದಿಂದ ಪಾರಾಗಿದ್ದಾನೆ.
ಮುಂಡಾಜೆ ಗ್ರಾಮದ ಶೀಟು ಕಾರ್ಯರ್ತೋಡಿ ರಸ್ತೆಯಲ್ಲಿ ಮೂರು ಮಾರ್ಗ ಎಂಬಲ್ಲಿ ಇಂದು ಬೆಳಿಗ್ಗೆ 7.30 ರ ಸಮಯ ಶಾಲಾ ಬಾಲಕ ಶಾಲೆಗೆ ಸೈಕಲ್ನಲ್ಲಿ ಬರುತ್ತಿದ್ದ ವೇಳೆ ಕಾಡಿನಿಂದ ರಸ್ತೆಗೆ ಚಿರತೆ ಬಂದಿದ್ದು, ಇದನ್ನು ಕಂಡು ಹೆದರಿ ಸೈಕಲನ್ನು ಹಿಂದೆ ತಿರುಗಿಸಿ ವೇಗವಾಗಿ ಬಂದು ಮನೆಗೆ ತಲುಪಿ, ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
ಇಂದು ಬೆಳಿಗ್ಗೆ ಕಡಿರುದ್ಯಾವರ ಗ್ರಾಮದಲ್ಲಿ ನಾಲ್ಕು ಚಿರತೆಗಳು ಕಂಡು ಬಂದ ಕುರಿತು ವರದಿಯಾಗಿದೆ. ಕಡಿರುದ್ಯಾವರ ಗ್ರಾಮದ ಕಾರ್ನಪ ಎಂಬಲ್ಲಿ ನಾಲ್ಕು ಚಿರತೆಗಳು ಸ್ಥಳೀಯರಿಗೆ ಕಂಡು ಬಂದಿರುವ ಕುರಿತು ವರದಿಯಾಗಿದ್ದು, ಇದು ಸ್ಥಳೀಯ ನಾಗರಿಕರಲ್ಲಿ ಆತಂಕ ಸೃಷ್ಟಿ ಉಂಟು ಮಾಡಿದೆ.
