ಹುಬ್ಬಳ್ಳಿ: ಸಾಕು ನಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಷಯ ಇದೀಗ ಹುಬ್ಬಳ್ಳಿಯ ಗುರುದೇವ ನಗರದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ಪರಶುರಾಮ ಎಂಬುವವರು ಸಾಕು ನಾಯಿ ವಿಚಾರಕ್ಕೆ ವಿಲ್ಸನ್ ಹಾಗೂ ವೈಷ್ಣವಿ ಎನ್ನುವ ದಂಪತಿ ವಿರುದ್ಧ ದೂರೊಂದನ್ನು ಪೊಲೀಸರಿಗೆ ನೀಡಿದ್ದಾರೆ. ದೂರಿನ ಅನುಸಾರ, ವಿಲ್ಸನ್ ಹಾಗೂ ವೈಷ್ಣವಿ ದಂಪತಿ ಸಾಕಿರುವ ರಾಟ್ ವೀಲರ್ ನಾಯಿ ಮದನ ಎಂಬ ಬಾಲಕನಿಗೆ ಕಚ್ಚಿದೆ. ಈ ವೇಳೆ ಬಾಲಕನನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪರಶುರಾಮ ಮೇಲೆಯೇ ಆರೋಪಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ನಾಯಿಗೇ ನೀವು ಹೊಡೆದಿದ್ದೀರಿ ಎನ್ನುವ ಆರೋಪವನ್ನು ಹೊರಿಸಿದ್ದಾರೆ.
ಜ.14 ರಂದು ಈ ಘಟನೆ ನಡೆದಿದ್ದು, ಈ ಕುರಿತು ಅದೇ ದಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಕುನಾಯಿಗಳ ಅಟ್ಟಹಾಸದಿಂದ ಗುರುದೇವ ನಗರ ನಿವಾಸಿಗಳು ತೊಂದರೆ ಅನುಭವಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಶುರಾಮ ಆಗ್ರಹ ಮಾಡಿದ್ದಾರೆ.
ಅಶೋಕ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ದಾಖಲೆಗಳು ಹಾಗೂ ವೈದ್ಯಕೀಯ ವರದಿಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.
