Home » ಆಸ್ಪತ್ರೆಗೆ ಜಾಗ ದಾನ ಮಾಡಿದಾತನಿಗೆ ಅದೇ ಆಸ್ಪತ್ರೆಯಲ್ಲಿ ಪುತ್ರನಿಗೆ ಆಂಬ್ಯುಲೆನ್ಸ್ ಸಿಗದೇ ಪ್ರಾಣಬಿಟ್ಟರು!

ಆಸ್ಪತ್ರೆಗೆ ಜಾಗ ದಾನ ಮಾಡಿದಾತನಿಗೆ ಅದೇ ಆಸ್ಪತ್ರೆಯಲ್ಲಿ ಪುತ್ರನಿಗೆ ಆಂಬ್ಯುಲೆನ್ಸ್ ಸಿಗದೇ ಪ್ರಾಣಬಿಟ್ಟರು!

0 comments
Death News

ಪಾವಗಡ (ತುಮಕೂರು): ಸರಕಾರಿ ಆಸ್ಪತ್ರೆಗೆ ಜಾಗ ದಾನ ನೀಡಿದ್ದ ವ್ಯಕ್ತಿ ಆಂಬ್ಯುಲೆನ್ಸ್‌ ನೆರವು ಲಭಿಸದೇ ತನ್ನ ಮಗನನ್ನು ಕಳೆದುಕೊಂಡಿದ್ದಾರೆ. ವೈ.ಎನ್.ಹೊಸಕೋಟೆ ಗ್ರಾಮದ ಸಾಧಿಕ್ ಸಾಬ್ ಅವರ ಪುತ್ರ ಸೈಯದ್ ಅಕ್ರಂ (45) ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಮೃತಪಟ್ಟ ದುರ್ದೈವಿ.

ಸಾಧಿಕ್ ಸಾಬ್ ಅವರು ತಾಲೂಕಿನ ವೈ.ಎನ್.ಹೊಸಕೋಟೆ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 2010ರಲ್ಲಿ ಸುಮಾರು 2 ಎಕರೆ ಜಾಗ ದೇಣಿಗೆ ನೀಡಿದ್ದರು. ಅವರ ಪುತ್ರ ಸೈಯದ್ ಅಕ್ರಂ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಉಸಿರಾಟದ ಸಮಸ್ಯೆ ಎದುರಾಗಿದ್ದು ಕೂಡಲೇ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಪಾವಗಡಕ್ಕೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದರೂ ಆಂಬ್ಯುಲೆನ್ಸ್ ಸಿಗಲಿಲ್ಲ. ಇರುವ ಆಂಬ್ಯುಲೆನ್ಸ್‌ಗೆ ಚಾಲಕ ಇಲ್ಲ, ಹಾಳಾಗಿದೆ ಎಂದು ಸಬೂಬು ಕೇಳಿಬಂತು. “ಖಾಸಗಿ ವಾಹನ ತರಿಸುವಷ್ಟರಲ್ಲಿ ಸೈಯದ್ ಅಕ್ರಂ ಮೃತಪಟ್ಟಿದ್ದ,” ಎಂದು ತಂದೆ ಸಾಧಿಕ್ ಸಾಬ್ ನೋವಿನಿಂದ ಹೇಳಿಕೊಂಡಿದ್ದಾರೆ.

ಇದೇ ವೈ.ಎನ್.ಹೊಸಕೋಟೆ ಹೋಬಳಿಯ ಪೆನ್ನೋಬನಹಳ್ಳಿಯಲ್ಲಿ ಹಾವು ಕಚ್ಚಿದ್ದ ನರಸರೆಡ್ಡಿ (65) ಎಂಬ ವ್ಯಕ್ತಿ ಆಂಬ್ಯುಲೆನ್ಸ್ ಸಕಾಲಕ್ಕೆ ಸಿಗದೆ ಇತ್ತೀಚೆಗೆ ಮೃತಪಟ್ಟಿದ್ದರು.

You may also like