ಪುತ್ತೂರು: ಆರ್‌ಎಸ್‌ಎಸ್ ಮುಖಮಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ಸಿಹಿ ಸುದ್ದಿ ದೊರಕಿದೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮೇ 1, 2025 ರಂದು ಬಜ್ಪೆಯಲ್ಲಿ ಹತ್ಯೆಯಾಗಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಪ್ರಭಾಕರ್ ಭಟ್ ಮೇಲಿದ್ದು, ಈ ಆರೋಪದ ಅನ್ವಯ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಂಜುನಾಥ್ ಟಿ ಅವರು ದೂರು ನೀಡಿದ್ದರು.
ಡಾ.ಪ್ರಭಾಕರ ಭಟ್ ಅವರ ವಿರುದ್ಧ ಬಿಎನ್‌ಎಸ್ 2023 ರ ಕಲಂ 353(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪೂರ್ಣಗೊಳಿಸಿ ಬಂಟ್ವಾಳದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಬಂಟ್ವಾಳ ನ್ಯಾಯಾಲದಲ್ಲಿ ನಡೆಯುತ್ತಿರುವ ಈ ವಿಚಾರಣೆಯನ್ನು ರದ್ದು ಮಾಡಬೇಕೆಂದು ಕೋರಿ ಡಾ.ಪ್ರಭಾಕರ ಭಟ್ ಅವರು ಹೈಕೋರ್ಟ್‌ನಲ್ಲಿ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಪುತ್ತೂರಿನ ಹಿರಿಯ ವಕೀಲರಾದ ಅರುಣ್‌ಶ್ಯಾಂ ಅವರು ಪ್ರಭಾಕರ್ ಭಟ್ ಅವರ ಪರವಾಗಿ ವಾದ ಮಂಡನೆ ಮಾಡಿದ್ದರು. ಈ ತಡೆಯಾಜ್ಞೆಯಿಂದ ವಿಚಾರಣೆ ಸ್ಥಗಿತಗೊಂಡಿದೆ.



