Kerala: ಇತ್ತೀಚಿನ ದಿನಗಳಲ್ಲಿ ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಮಾಡುವ ಸಂದರ್ಭ ಇವತಿಯರು ತಮಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ವಿಡಿಯೋಗಳು ನಿಜವೂ ಹೌದು. ಅನೇಕ ಕಾಮುಕರು ತಮ್ಮ ಪಕ್ಕದಲ್ಲಿ ಕುಳಿತವರ ಖಾಸಗಿ ಅಂಗಗಳನ್ನು ಮುಟ್ಟುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ. ಮನನೊಂದ ಯುವತಿಯರು ಧೈರ್ಯದಿಂದ ವಿಡಿಯೋ ಮಾಡಿಕೊಂಡು ಕಾಮುಕರ ಚಳಿ ಬಿಡಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಕೆಲವೊಂದು ತಪ್ಪು ತಿಳುವಳಿಕೆಯಿಂದ ಅನಾಹುತಗಳು ಸಂಭವಿಸುತ್ತಿವೆ. ಇದೀಗ ಅಂತದ್ದೇ ಒಂದು ಘಟನೆ ನಡೆದಿದೆ ಎನ್ನಲಾಗಿದೆ.
ಹೌದು, ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬಸ್ ಒಂದು ತುಂಬಾ ರಶ್ ಆಗಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ವಿಡಿಯೋ ಮಾಡಿ ವೈರಲ್ ಮಾಡಿದ್ದು, ಇದೀಗ ವಿಡಿಯೋದಲ್ಲಿದ್ದ ಯುವಕ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಜನವರಿ 18, 2026ರ ಭಾನುವಾರ ಬೆಳಿಗ್ಗೆ ನಡೆದಿದ್ದು, ಪಿಟಿಐ ಮತ್ತು ಎಎನ್‌ಐ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಗೋವಿಂದಪುರಂ ನಿವಾಸಿಯಾಗಿದ್ದ 42 ವರ್ಷದ ಯು.ದೀಪಕ್ ಎಂಬ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ದೀಪಕ್ ಯು ಎಂಬ ಈ ವ್ಯಕ್ತಿ ಕೋಳಿಕ್ಕೋಡ್‌ನ ಗೋವಿಂದಪುರಂ ನಿವಾಸಿ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೋಷಕರು ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹಲವು ಬಾರಿ ಬಾಗಿಲು ಬಡಿದು ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆತಂಕಗೊಂಡ ಪೋಷಕರು ನೆರೆಮನೆಯವರ ನೆರವಿನೊಂದಿಗೆ ಬಾಗಿಲು ತೆರೆದಾಗ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಯುವತಿ ವೈರಲ್ ಮಾಡಿದ್ದ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡ ತಕ್ಷಣ, ಆ ವ್ಯಕ್ತಿಯನ್ನು ಆನ್‌ಲೈನ್‌ನಲ್ಲಿ ತೀವ್ರವಾಗಿ ನಿಂದಿಸಲಾಯಿತು, ಇದು ತೀವ್ರ ಮಾನಸಿಕ ಒತ್ತಡಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಅದನ್ನು ನಿಭಾಯಿಸಲು ಸಾಧ್ಯವಾಗದೆ ಆ ವ್ಯಕ್ತಿ ಈ ಕಠಿಣ ಕ್ರಮ ತೆಗೆದುಕೊಂಡಿದ್ದಾನೆ. ಆ ವ್ಯಕ್ತಿಯ ಮರಣದ ನಂತರ ವೀಡಿಯೊ ಮಾಡಿದ ಮಹಿಳೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.



