Home News ಮಾಳವಿಕಾ ಹೆಗ್ಡೆ ವಿರುದ್ಧದ ಇ.ಡಿ ಶೋಕಾಸ್‌ ನೋಟಿಸ್‌ಗೆ ಹೈಕೋರ್ಟ್‌ ತಡೆ

ಮಾಳವಿಕಾ ಹೆಗ್ಡೆ ವಿರುದ್ಧದ ಇ.ಡಿ ಶೋಕಾಸ್‌ ನೋಟಿಸ್‌ಗೆ ಹೈಕೋರ್ಟ್‌ ತಡೆ

Image Credit: ZEE News

ಕಾಫಿ ಡೇ ಮಾಲೀಕರಾಗಿದ್ದ ವಿ.ಜಿ.ಸಿದ್ದಾರ್ಥ ಅವರ ಪತ್ನಿ ಹಾಗೂ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಸಿಡಿಇಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಳವಿಕಾ ಹೆಗ್ಡೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಜಾರಿ ಮಾಡಿರುವ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ವಾದ ಆಲಿಸಿದ ಬಳಿಕ ನ್ಯಾಯಾಲಯ, “ಸಿದ್ದಾರ್ಥ 2019ರಲ್ಲಿ ನಿಧನರಾಗಿದ್ದು, ಅವರ ವಾರಸುದಾರರಾದ ಮಾಳವಿಕಾಗೆ ಫಮಾ ಕಾಯಿದೆ ಸೆಕ್ಷನ್ 16 ರಡಿ 2022ರ ನ.3 ರಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಮತಪಟ್ಟಿರುವವರ ವಿರುದ್ಧದ ಪ್ರಕರಣವನ್ನು ಅವರ ವಾರಸುದಾರರ ವಿರುದ್ಧ ಮುಂದುವರಿಸಲು ಕಾನೂನಿನಡಿ ಅವಕಾಶವಿಲ್ಲವೆಂದು ವಾದಿಸಲಾಗಿದೆ. ಹಾಗಾಗಿ, ಶೋಕಾಸ್ ನೋಟಿಸ್ ಮತ್ತು ಅದರ ಪ್ರಕ್ರಿಯೆಗೆ ತಡೆ ನೀಡಲಾಗುವುದು,” ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, “ಕೆಫೆ ಕಾಫಿ ಡೇಯನ್ನು ವಿ.ಜಿ. ಸಿದ್ದಾರ್ಥ ಆರಂಭಿಸಿ ಮುನ್ನಡೆಸುತ್ತಿದ್ದರು. 2010ರಲ್ಲಿ ಕಂಪನಿಯಲ್ಲಿ ವಿದೇಶಿ ಹೂಡಿಕೆ ನಡೆದಿತ್ತು. ಈ ಸಂಬಂಧ 2022ರ ನ.3ರಂದು ಜಾರಿ ನಿರ್ದೇಶನಾಲಯ ದೂರು ದಾಖಲಿಸುವ ವೇಳೆಗೆ ಸಿದ್ದಾರ್ಥ ನಿಧನರಾಗಿದ್ದರು. ಹಾಗಾಗಿ, ವಾರಸುದಾರರು ಎಂದು ಮಾಳವಿಕಾ ವಿರುದ್ಧ ದೂರು ದಾಖಲಿಸಲಾಗದು,” ಎಂದು ನ್ಯಾಯಾಲಯದ ಗಮನಸೆಳೆದರು.

2010ರಲ್ಲಿ ಮಾರಿಷಸ್‌ ಸ್ಟ್ಯಾಂಡರ್ಡ್ ಚಾರ್ಟಡ್್ರ ಪ್ರೈವೇಟ್ ಈಕ್ವಿಟಿ, ಕೆಕೆಆರ್ ಮಾರಿಷಸ್ ಪಿಇ ಇನ್ವೆಸ್ಟ್‌ಮೆಂಟ್, ಅರ್ಡ್‌ಯೋನೊ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಎನ್‌ಎಸ್‌ಆರ್ ಪಿಇ ಮಾರಿಷಸ್ ಎಲ್‌ಎಲ್‌ಸಿಯಿಂದ ಒಟ್ಟಾರೆ 960 ಕೋಟಿ ರೂ. ವಿದೇಶಿ ನೇರ ಹೂಡಿಕೆಯ ಹಣವನ್ನು ಸಿಡಿಇಎಲ್ ಪಡೆದಿತ್ತು. ಅದನ್ನು ಭಾರತದ ಬೇರೆ ಕಂಪನಿಗಳಲ್ಲಿ ಷೇರು ಖರೀದಿಸಲು ಬಳಕೆ ಮಾಡಿದೆ ಎಂದು ಜಾರಿ ನಿರ್ದೇನಾಲಯ ದೂರಿದೆ. ಈ ಹಣ ವರ್ಗಾವಣೆ ನಡೆದು 12 ವರ್ಷಗಳ ಬಳಿಕ ಜಾರಿ ನಿರ್ದೇಶನಾಲಯ ದೂರು ದಾಖಲಿಸಿದ್ದು, ಮಾಳವಿಕಾಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿದೆ. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.