ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಶಾಕಿಂಗ್ ಸುದ್ದಿ ನೀಡಿದ್ದು, ಹಾಲಿಡೇಗೆ ಬ್ರೇಕ್ ಹಾಕಿದೆ. ಪಿಯು ಫಲಿತಾಂಶ ಸುಧಾರಣೆ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಮಾಡಿರುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಇನ್ನು ಮುಂದೆ ಪರೀಕ್ಷೆ ಮುಗಿಯುವವರೆಗೂ ಪಿಯು ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕಾಗುತ್ತದೆ.
ಪೂರ್ವಸಿದ್ಧತಾ ಪರೀಕ್ಷೆ ಮುಗಿದ ನಂತರ ಸುಮಾರು ಒಂದು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇ ನೀಡಲಾಗುತ್ತಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಫೆ.26 ರವರೆಗೆ ಕಾಲೇಜುಗಳನ್ನು ನಡೆಸಲು ಇಲಾಖೆ ನಿರ್ಧಾರ ಮಾಡಿದ್ದು ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಉಪನ್ಯಾಸಕರ ನೇತೃತ್ವದಲ್ಲಿ ಮುಖ್ಯ ಪರೀಕ್ಷೆಗೆ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ.
ಪಠ್ಯ ಪುನರವಲೋಕನ, ಅನುಮಾನ ನಿವಾರಣೆ, ಪ್ರಶ್ನೋತ್ತರ ಚರ್ಚೆಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದು ಕಾಲೇಜುಗಳಿಗೆ ಸೂಚಿಸಲಾಗಿದೆ. ಜೊತೆಗೆ ಉಪನ್ಯಾಸಕರು ಕೂಡ ಪರೀಕ್ಷೆ ಮುಗಿಯುವವರೆಗೂ ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು ಎಂದು ಆದೇಶಿಸಲಾಗಿದೆ.













