Home News ಜ.25: ನಡ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ- ಬಿ.ಮುನಿರಾಜ ಅಜಿ-ಪತ್ರಿಕಾಗೋಷ್ಠಿ

ಜ.25: ನಡ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ- ಬಿ.ಮುನಿರಾಜ ಅಜಿ-ಪತ್ರಿಕಾಗೋಷ್ಠಿ

ನಡ: 1925ರಲ್ಲಿ ನಡಗುತ್ತು ದಿ। ಚಂದ್ರಯ್ಯ ಅಜ್ಜಿಯವರಿಂದ ಆರಂಭಗೊಂಡು ಶತಮಾನೋತ್ಸವ ಸಂಭ್ರಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡದ ಶತಮಾನೋತ್ಸವದ ಸಂಭ್ರಮ ಕಾರ್ಯಕ್ರಮ ಜ.25ರಂದು ನಡೆಯಲಿದೆ. ಈ ಕುರಿತು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಹಳೇವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಜ. 20 ನಡ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಶತಮಾನೋತ್ಸವ ಕಾರ್ಯಾಧ್ಯಕ್ಷ ಶಶಿಕಿರಣ್ ಜೈನ್ ಮಾತನಾಡಿ “ಶಾಲೆ ಆರಂಭ ಆದಾಗಿನಿಂದ 42 ವರ್ಷಗಳ ಕಾಲ ನಡಗುತ್ತು ಮನೆತನದವರ ಕಟ್ಟಡದಲ್ಲೇ ನಡೆಯುತ್ತಿತ್ತು. ನಂತರ ಹೊಸ ಕಟ್ಟಡದಲ್ಲಿ ಆರಂಭಗೊಂಡಿತು. 2024ರಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಕೆ. ಹರೀಶ್ ಕುಮಾರ್ ಅವರ ಪಯತ್ನದಿಂದ ರೂ. 1.25 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಜ.25ಕ್ಕೆ ಶತಸಂವತ್ಸರ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಗ್ಗೆ ಬೆಳಿಗ್ಗೆ 8ಗಂಟೆಗೆ ಹಿರಿಯ ವಿದ್ಯಾರ್ಥಿ ಡಾ| ಸತೀಶ್ಚಂದ್ರರಿಂದ ಆಕರ್ಷಕ ಮೆರವಣಿಗೆ ಉದ್ಘಾಟನೆಗೊಂಡು. ಪುರ್ವಾಹ್ನ 9.15ಕ್ಕೆ ಹಿರಿಯ ವಿದ್ಯಾರ್ಥಿ ಅಜಿತ್ ಕುಮಾರ್ ಆರಿಗರಿಂದ ಶಾಲಾ ಸ್ವಾಗತ. ದ್ವಾರ ಲೋಕಾರ್ಪಣೆಗೊಳ್ಳಲಿದೆ. ಪೂರ್ವಾಹ್ನ 10.00ಗಂಟೆಗೆ ಮೋಹನ್ ಕುಮಾರ್ ಕೆ. ಲಕ್ಷ್ಮಿಗ್ರೂಪ್ ಇವರಿಂದ ಇಂಟರ್‌ಲಾಕ್ ಅಳವಡಿಕೆ ಹಸ್ತಾಂತರಗೊಂಡು, ಶತಮಾನೋತ್ಸವದ ಶಾಶ್ವತ ಕೊಡುಗೆಯಾದ ರಂಗ ಮಂದಿರದ ಲೋಕಾರ್ಪಣೆಯು ಬೆಳಿಗ್ಗೆ 10.15ಕ್ಕೆ ಬರೋಡಾದ ಉದ್ಯಮಿ, ಶಾಲೆಗೆ ವಿಶೇಷ ಕೊಡುಗೆ ನೀಡಿದ ಶಶಿಧರ ಶೆಟ್ಟಿ ನವಶಕ್ತಿ ಇವರಿಂದ ಲೋಕಾರ್ಪಣೆಗೊಳ್ಳಲಿದೆ.

ನಂತರ ಸಭಾಕಾರ್ಯಕ್ರಮವು ಶಾಸಕ ಹರೀಶ್ ಪೂಂಜಾರವರ ಅಧ್ಯಕ್ಷತೆಯಲ್ಲಿ ಜರಗಲಿದೆ” ಎಂದರು

“ಮಧ್ಯಾಹ್ನದ ನಂತರ ಮಕ್ಕಳ ಸಾಂಸ್ಕೃತಿಕ ಝೇಂಕಾರ ಕಾರ್ಯಕ್ರಮ, ನಂತರ ಹಿರಿಯ ವಿದ್ಯಾರ್ಥಿ ಸುಂದರ ಬಂಗಾಡಿ ತಂಡದಿಂದ ಯಕ್ಷರಸ ಕುಸಲ್ದ ಗೊಬ್ಬು, ಅಪರಾಹ್ನ 3.30ಕ್ಕೆ ಬಹುಮಾನ ವಿತರಣೆ. ನಂತರ ಹಿರಿಯ ವಿದ್ಯಾರ್ಥಿಗಳ ಸಮಾಗಮ, ಗುರುವಂದನೆ, 70 ವರ್ಷ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ರಾತ್ರಿ ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ ತಂಡದಿಂದ ತುಳು ಹಾಸ್ಯಮಯ ಸಾಮಾಜಿಕ ನಾಟಕ ಒಂತೆ ಲೇಟಾಂಡ್ ಆಂಡಲ.. ಪ್ರದರ್ಶನಗೊಳ್ಳಲಿದೆ” ಎಂದು ತಿಳಿಸಿದರು.

ಈ ವೇಳೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮುನಿರಾಜ ಅಜಿ ಮಾತನಾಡಿ ” ಬಡ ಜನರ ಜ್ಞಾನಕ್ಕಾಗಿ ನೂರು ವರ್ಷಗಳ ಹಿಂದೆ ನಡಗುತ್ತು ಮನೆತನದವರು ಶಾಲೆ ಆರಂಭಿಸಿದರು.ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲಿ ಇದ್ದಾರೆ, ಪ್ರತಿ ತಿಂಗಳು ಇದರ ನೆನಪಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ, ಶಾಲೆಯ ಕಾರ್ಯಕ್ರಮವನ್ನು ಜಾತ್ರೆಯ ರೀತಿಯಲ್ಲಿ ಮಾಡಲು ನಿರ್ಧರಿಸಿದ್ದೇವೆ, ಈ ಶಾಲೆಗೆ ನಂತರ ಈಗ ಮೆಸ್ಕಾಂ ನಿಗಮ ಅಧ್ಯಕ್ಷ ಕೆ ಹರೀಶ್ ಕುಮಾರ್ ನೇತೃತ್ವದಲ್ಲಿ ಭವ್ಯ ಕಟ್ಟಡ ಮೂಲಭೂತ ಸೌಕರ್ಯ ಸರ್ಕಾರದಿಂದ ಒದಗಿಸಿಕೊಟ್ಟಿದ್ದಾರೆ.ಇದಕ್ಕೆ ಜನಪ್ರತಿನಿಧಿಗಳು ಸಹಕರಿಸಿದ್ದಾರೆ. ಇಲ್ಲಿ ಕಲಿತವರು ವೈದ್ಯರು, ಇಂಜಿನಿಯರ್ಸ್, ರಾಜಕಾರಣಿ, ವಕೀಲರು, ಸರ್ಕಾರಿ ಉನ್ನತ ಹುದ್ದೆ, ಸೇರಿದಂತೆ ಅಪಾರ ಸಾಧನೆ ಮಾಡಿದ್ದಾರೆ. ನಾವು ಶತಮಾನೋತ್ಸವ ಹಿನ್ನಲೆಯಲ್ಲಿ ಶಾಶ್ವತ ನೆನಪಿಗಾಗಿ 15ಲಕ್ಷ ವೆಚ್ಚದ ರಂಗಮಂದಿರ ನಿರ್ಮಾಣವಾಗುತ್ತಿದೆ. ಸ್ವಾಗತ ದ್ವಾರ, ಇಂಟರ್ ಲಾಕ್ ಅಳವಡಿಕೆ ಮಾಡಲಾಗುತ್ತಿದೆ. 70 ವರ್ಷದ ಮೇಲ್ಪಟ್ಟ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲು ನಿರ್ಧರಿಸಿದ್ದೇವೆ. ಹಿಂದೆ ಮಕ್ಕಳು ದೋಣಿಯಲ್ಲಿ ಶಾಲೆಗೆ ಬರುತ್ತಿದ್ದರು, ಅದಕ್ಕೂ ವ್ಯವಸ್ಥೆ ಕಲ್ಪಿಸಿದ್ದರು” ಎಂದರು.

ಇದೇ ವೇಳೆ ಶಾಲೆಯ ಹಳೆ ವಿದ್ಯಾರ್ಥಿ,ಮೆಸ್ಕಾಂ ನಿಗಮ ಅಧ್ಯಕ್ಷ ಕೆ ಹರೀಶ್ ಕುಮಾರ್ ಮಾತನಾಡಿ ” ದಿ. ಚಂದ್ರಯ್ಯ ಅಜ್ಜಿಯವರು ಶಿಕ್ಷಣದ ಬಗ್ಗೆ ಒಲವು ಹೊಂದಿ ಸ್ವಂತ ಖರ್ಚಿನಲ್ಲಿ ಶಾಲೆ ಆರಂಭಿಸಿದರು. ಅವರನ್ನು ಸ್ಮರಿಸಲೇಬೇಕಿದೆ. ನೂರು ವರ್ಷಗಳಲ್ಲಿ ಅನೇಕ ಮಂದಿ ಈ ಶಾಲಾಭಿವೃದ್ಧಿಗೆ ದುಡಿದಿದ್ದಾರೆ. ಶಾಲೆಯ ಕೊರತೆ ನೀಗಿಸುವತ್ತ ಹಿರಿಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಒಂದು ವರ್ಷದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಮಾರೋಪ ಸಮಾರಂಭಕ್ಕೆ ಶಿಕ್ಷಣ ಸಚಿವರು ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತಿದೆ. ಸಂಭ್ರಮಾಚರಣೆ ಯಶಸ್ವಿಯಾಗಿ ನಡೆಯಲಿ” ಎಂದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ಪುಷ್ಪ, ಕೋಶಾಧಿಕಾರಿ ಸಯ್ಯದ್ ಹಬೀಬ್ ಸಾಹೇಬ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ದನ ನಾಯ್ಕ, ಶಾಲಾ ವಿದ್ಯಾರ್ಥಿ ನಾಯಕ ಚಿರಾಗ್, ವಸಂತ ಗೌಡ, ಸಂಧ್ಯಾ ಜೈನ್ ಮತ್ತು ವಸಂತ ವಿ.ಜೆ. ಉಪಸ್ಥಿತರಿದ್ದರು. ಶತಮಾನೋತ್ಸವ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಶ್ರದ್ಧಾ ಸ್ವಾಗತಿಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಕುಮಾರ್ ವಂದಿಸಿದರು.