ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರುಗಳು ನ್ಯಾಯಾಂಗ ಬಂಧನದಲ್ಲಿದ್ದರೆ ಅವರಿಗೆ ವಾರಕ್ಕೊಮ್ಮೆ ಮನೆ ಊಟ ಸಿಗುತ್ತಿತ್ತು. ಈ ಮೂವರಿಗೆ ಜೈಲಿನಲ್ಲೇ ಮನೆ ಊಟ ಸಿಗುವಂತೆ ವ್ಯವಸ್ಥೆ ಮಾಡಿದ್ದರು. ಇದೀಗ ಹೈಕೋರ್ಟ್ ಮನೆ ಊಟ ಆದೇಶಕ್ಕೆ ತಡೆ ನೀಡಿದೆ.
ಪವಿತ್ರಾ ಗೌಡ ಮತ್ತು ಇತರೆ ಇಬ್ಬರು ಆರೋಪಿಗಳಿಗೆ ಮನೆ ಊಟ ಕೊಡುವಂತೆ 57 ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನೆ ಮಾಡಿ ಜೈಲಾಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.
ಕಾನೂನಿಗೆ ಎಲ್ಲರೂ ಒಂದೇ ಎಂದಿರುವ ನ್ಯಾಯಾಲಯವು, ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿರುವಂತೆ ಯಾರಿಗೂ ಸಹ ವಿಶೇಷ ಸವಲತ್ತು ನೀಡುವಂತಿಲ್ಲ ಎಂದಿದೆ. ಅಲ್ಲದೆ, ಜೈಲು ಕೈಪಿಡಿಯಲ್ಲಿ ಮನೆ ಊಟವನ್ನು ಕೇವಲ ಬಹಳ ವಿಶೇಷ ಸಂದರ್ಭದಲ್ಲಿ ಐಜಿಪಿ ಅವರ ಒಪ್ಪಿಗೆ ಮೇರೆಗೆ ಮಾತ್ರವೇ ನೀಡಬೇಕು, ಅದೂ ಆ ಕಾರಣ ವೈದ್ಯಕೀಯ ಕಾರಣ ಆಗಿರಬೇಕು ಎಂಬುದನ್ನು ಸಹ ಹೈಕೋರ್ಟ್ ಉಲ್ಲೇಖಿಸಿದೆ.












