IPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ಕೇವಲ 5 ಪಂದ್ಯಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್ಗೆ ಪ್ರವೇಶಿಸಿದೆ. ಆಡಿರುವ ಐದು ಮ್ಯಾಚ್ಗಳಲ್ಲೂ ಗೆಲ್ಲುವ ಮೂಲಕ ಆರ್ಸಿಬಿ ಪಡೆ ಒಟ್ಟು 10 ಅಂಕಗಳನ್ನು ಪಡೆದಿದ್ದು, ಈ ಮೂಲಕ ಟಾಪ್-3 ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಇತ್ತ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೇರವಾಗಿ ಫೈನಲ್ಗೇರಲು ಉತ್ತಮ ಅವಕಾಶವಿದೆ. ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇಆಫ್ ಆಡಲಿರುವುದು ಅಂಕ ಪಟ್ಟಿಯಲ್ಲಿ ಟಾಪ್-3 ಸ್ಥಾನಗಳನ್ನು ಪಡೆದಿರುವ ತಂಡಗಳು.
ಅದರಲ್ಲೂ ಲೀಗ್ ಹಂತದ ಮುಕ್ತಾಯದ ವೇಳೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯುತ್ತದೆ. ಇನ್ನುಳಿದ ಎರಡು ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ. ಇದರಲ್ಲಿ ಗೆಲ್ಲುವ ತಂಡವು ಫೈನಲ್ಗೆ ಪ್ರವೇಶಿಸುತ್ತದೆ.
ಇದೀಗ ಅಂಕ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಸ್ಥಾನದಲ್ಲಿದೆ. ಹೀಗಾಗಿ ಇನ್ನುಳಿದ ಮೂರು ಮ್ಯಾಚ್ಗಳಲ್ಲಿ ಒಂದು ಗೆಲುವು ದಾಖಲಿಸಿದರೆ ಫೈನಲ್ ಆಡುವುದು ಖಚಿತವಾಗಲಿದೆ. ಏಕೆಂದರೆ ಆರ್ಸಿಬಿ ತಂಡವನ್ನು ಹೊರತುಪಡಿಸಿ ಯಾವುದೇ ತಂಡಕ್ಕೆ 12 ಅಂಕಗಳನ್ನು ಗಳಿಸಲು ಅವಕಾಶವಿಲ್ಲ.













